ಕೊರೊನಾದಿಂದ ತತ್ತರಿಸಿಹೋಗಿರುವ ಚಿತ್ರಮಂದಿರಗಳು ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಪುನಾರಂಭಕ್ಕೆ ಕಾಯುತ್ತಿವೆ. ಚಿತ್ರಮಂದಿರಗಳು ಮತ್ತೆ ಆರಂಭವಾಗಲು ಹೇಗೆ ವ್ಯವಸ್ಥೆ ಮಾಡಿಕೊಂಡಿವೆ ಎಂದು ಭಾರತೀಯ ಸಿನಿಮಾ ನಿರ್ಮಾಪಕರ ಕೌನ್ಸಿಲ್ ಕೂಡಾ ವಿವರ ನೀಡಿದೆ.
ಜೂನ್ 8 ರಿಂದ ದೇವಸ್ಥಾನಗಳು, ಮಾಲ್ಗಳು ತೆರೆದರೂ ಜನರು ಮಾತ್ರ ಹೊರಗೆ ಬಂದಿಲ್ಲ. ಇನ್ನು ಥಿಯೇಟರ್ ತೆರೆದರೆ, ಬಡವರ್ಗದ ಜನರು ಬಂದು ದುಡ್ಡು ಕೊಟ್ಟು ಸಿನಿಮಾ ಮಾಡುತ್ತಾರಾ ಎಂಬ ಪ್ರಶ್ನೆ ಎದುರಾಗಿದೆ. ಏಕೆಂದರೆ ಲಾಕ್ಡೌನ್ನಿಂದ ಜನರು ದುಡ್ಡು ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಲಾಕ್ಡೌನ್ ಸಡಿಲಿಕೆ ಆದ ನಂತರ ಜನರು ಇಷ್ಟು ದಿನಗಳು ಅವರು ಅನುಭವಿಸಿರುವ ನಷ್ಟವನ್ನು ಸರಿದೂಗಿಸುವ ಬಗ್ಗೆ ಗಮನ ನೀಡುತ್ತಾರೆಯೇ ಹೊರತು ಮನರಂಜನೆ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ. ಜನರು ಈ ರೀತಿ ಯೋಚಿಸಿದಾಗ ಇನ್ನು ಚಿತ್ರಮಂದಿರಗಳು ತೆರೆದರೆ ಮುಂದಿನ ಪರಿಸ್ಥಿತಿ ಏನು..? ಥಿಯೇಟರ್ಗಳು ಕೂಡಾ ತಮಗೆ ಆಗಿರುವ ನಷ್ಟವನ್ನು ಸರಿದೂಗಿಸಲು ದೊಡ್ಡ ಸ್ಟಾರ್ಗಳ ಸಿನಿಮಾಗಳನ್ನು ಕಾಯುತ್ತಿವೆ.
ಇನ್ನು ರಾಜ್ಯದಲ್ಲಿ 700 ಸಿಂಗಲ್ ಸ್ಕ್ರೀನ್ ಹಾಗೂ 950 ಮಲ್ಟಿಪ್ಲೆಕ್ಸ್ಗಳಿವೆ. ಶೀಘ್ರವೇ ಬಿಡುಗಡೆಗೆ ಕಾದಿರುವ ದೊಡ್ಡ ಸ್ಟಾರ್ ಸಿನಿಮಾಗಳು ಯಾವುದು ಎಂಬ ಪ್ರಶ್ನೆ ಕೂಡಾ ಎದುರಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಹಾಗೂ ದುನಿಯಾ ವಿಜಯ್ ನಿರ್ದೇಶನದ 'ಸಲಗ' ಸಿನಿಮಾ ಬಿಟ್ಟರೆ ಬೇರೆ ಸಿನಿಮಾಗಳು ರೆಡಿ ಇಲ್ಲ. ಯಶ್ ಅವರ 'ಕೆಜಿಎಫ್ ಚಾಪ್ಟರ್ 2' ಅಕ್ಟೋಬರ್ನಲ್ಲಿ ಬಿಡುಗಡೆ ಎಂದು ಘೋಷಣೆಯಾಗಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ 'ಯುವರತ್ನ' ಚಿತ್ರೀಕರಣ ಬಾಕಿ ಇದೆ. ಸುದೀಪ್ ಅವರ 'ಕೋಟಿಗೊಬ್ಬ3' ಕೂಡಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಧ್ರುವಾಸರ್ಜಾ 'ಪೊಗರು' ಚಿತ್ರೀಕರಣ ಮುಗಿಸಿದೆ. ಆದರೆ, ತಕ್ಷಣ ಬಿಡುಗಡೆಯಾಗುವುದು ಡೌಟ್. ಇನ್ನು ಶಿವರಾಜ್ಕುಮಾರ್, ಗಣೇಶ್, ರಕ್ಷಿತ್ ಶೆಟ್ಟಿ, ಉಪೇಂದ್ರ, ರವಿಚಂದ್ರನ್ ಸಿನಿಮಾಗಳು ಕೂಡಾ ತಕ್ಷಣ ಬಿಡುಗಡೆಯಾಗುವ ಸಾಧ್ಯತೆಗಳು ಇಲ್ಲ.
ಈ ಮಧ್ಯೆ ಇನ್ನೂ ಹೆಸರು ಮಾಡಿರದ ನಾಯಕರ ಸಿನಿಮಾಗಳು, ಕಲಾತ್ಮಕ , ಎಕ್ಸ್ಪಿರಿಮೆಂಟಲ್ ಸಿನಿಮಾಗಳನ್ನು ಥಿಯೇಟರ್ ಮಾಲೀಕರು ಪ್ರದರ್ಶಿಸುವುದು ಅನುಮಾನ ಎಂದೇ ಹೇಳಲಾಗುತ್ತಿದೆ. ಆದರೆ ಈಗ ಅವಕಾಶ ಇರುವುದು ಡಬ್ ಆದ ಸಿನಿಮಾಗಳಿಗೆ. ಆದರೆ ಇದುವರೆಗೂ ಯಾವ ಡಬ್ಬಿಂಗ್ ಸಿನಿಮಾಗಳು ಕೂಡಾ ನಿರೀಕ್ಷೆಯ ಮಟ್ಟ ತಲುಪಿಲ್ಲ. ಇದರ ಜೊತೆಗೆ ಮಾರ್ಚ್ 14 ರಿಂದ ಸಿನಿಮಾ ಪ್ರದರ್ಶನ ರದ್ದುಗೊಂಡಾಗ, ಲಾಕ್ಡೌನ್ ಸಡಿಲಿಕೆ ಆದಾಗ ಮಾರ್ಚ್ 12, 13 ರಂದು ಬಿಡುಗಡೆಯಾದ ಸಿನಿಮಾಗಳಿಗೆ ಮಾತ್ರ ಮೊದಲ ಆದ್ಯತೆ, ಬಿಡುಗಡೆಯಾಗಲು ರೆಡಿ ಇರುವ ಸಿನಿಮಾಗಳು ಸರತಿಯಲ್ಲಿ ಕಾಯಬೇಕು ಎಂದು ಹೇಳಲಾಗಿತ್ತು.
ದರ್ಶನ್ ಅಭಿನಯದ 'ರಾಬರ್ಟ್', ಮನು ರವಿಚಂದ್ರನ್ ಅಭಿನಯದ 'ಪ್ರಾರಂಭ', ರಾಣಾ ಸುನಿಲ್ ಕುಮಾರ್ ಸಿಂಗ್ ಅವರ 'ಮೀನಾ ಬಜಾರ್.ಕಾಂ', ಹರಿ ಅಭಿನಯದ 'ಎಂಆರ್ಪಿ', ದುನಿಯಾ ವಿಜಯ್ ನಟಿಸಿ, ಮೊದಲ ಬಾರಿ ನಿರ್ದೇಶನದ 'ಸಲಗ', ಚಾಂಪಿಯನ್' ಪವನ್ ಶೆಟ್ಟಿ ಅವರ 'ರನ್ 2', ಡಾರ್ಲಿಂಗ್ ಕೃಷ್ಣ ಅಭಿನಯದ 'ಲೋಕಲ್ ಟ್ರೈನ್' ಸಿನಿಮಾಗಳು ಬಿಡುಗಡೆ ಆಗಲು ಸಾಲಿನಲ್ಲಿ ಕಾಯುತ್ತಿವೆ.
ಸುಮಾರು 50 ಕನ್ನಡ ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಅಂತಿಮ ಘಟ್ಟದಲ್ಲಿದ್ದು ಅವೆಲ್ಲಾ 1-2 ತಿಂಗಳಿನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ತುರ್ತು ನಿರ್ಗಮನ, ಒಂದು ಗಂಟೆಯ ಕಥೆ, ಟಕ್ಕರ್, ಕುಷ್ಕ, ನಿನ್ನ ಸನಿಹಕೆ, ಘಾರ್ಗ, ಗೋರಿ, ಎಲ್ಲಿ ನಿನ್ನ ವಿಳಾಸ, ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ, ಏಕ್ ಲವ್ ಯಾ, ದಾರಿ ಯಾವುದಯ್ಯ ವೈಕುಂಠಕ್ಕೆ, ಅಮೃತಮತಿ, ರೈಮ್, ಗೋದ್ರಾ, ಟಾಮ್ ಅಂಡ್ ಜೆರ್ರಿ, ಕಲಿವೀರ, ಗೋವಿಂದ ಗೋವಿಂದ, ಕೊಡೆ ಮುರುಗ, ಅಭ್ಯಂಜನ, ಸಿಲ್ವರ್ ಫಿಶ್, ಮೇಲೊಬ್ಬ ಮಾಯಾವಿ, ಕನ್ನೇರಿ, ಕುತಸ್ಥ, ಅಮೃತ ಅಪಾರ್ಟ್ಮೆಂಟ್, ಭೈರಾದೇವಿ, 100, ಕೃಷ್ಣ ಟಾಕೀಸ್, ಶೋಕಿವಾಲ, ತ್ರಿಪುರ, ರಾಮಾರ್ಜುನ, ತಮಟೆ, ಝಾನ್ಸಿ, ಸಾರಾ ವಜ್ರ, ಬಯಲಾಟದ ಭೀಮಣ್ಣ, ಕಾಫಿ ಕಟ್ಟೆ, ಧೂಮ್ ಅಗೈನ್, ಇನ್ಸ್ಪೆಕ್ಟರ್ ವಿಕ್ರಮ್, ತಾಜ್ ಮಹಲ್ 2, ನಟ ಭಯಂಕರ, ಒಂಭತ್ತನೇ ಅದ್ಭುತ, ಶ್ರೀಮಂತ ಹಾಗೂ ಇನ್ನಿತರ ಸಿನಿಮಾಗಳು ಪಟ್ಟಿಯಲ್ಲಿ ಇವೆ.
ಆದರೆ ಥಿಯೇಟರ್ಗಳು ತೆರೆದರೂ ಜನರು ಸಿನಿಮಾ ನೋಡಲು ಬರುತ್ತಾರಾ ಎಂಬುದನ್ನು ಕಾದು ನೋಡಬೇಕು.