ಶಿವರಾಜ್ಕುಮಾರ್ ಅಭಿನಯದ 123ನೇ ಸಿನಿಮಾ 'ಶಿವಪ್ಪ' ಮುಹೂರ್ತ ಇತ್ತೀಚೆಗಷ್ಟೇ ನಡೆದಿದ್ದು ಇಂದಿನಿಂದ ಚಿತ್ರೀಕರಣ ಆರಂಭವಾಗಲಿದೆ. 'ಶಿವಪ್ಪ' ಸಿನಿಮಾಗೂ ಮುನ್ನ 'ಆರ್ಡಿಎಕ್ಸ್' ಹಾಗೂ 'ಎಸ್ಆರ್ಕೆ' ಚಿತ್ರಗಳನ್ನು ಶಿವರಾಜ್ಕುಮಾರ್ ಒಪ್ಪಿಕೊಂಡಿದ್ದರು. ಆದರೆ ಈ ಸಿನಿಮಾಗಳು ಸದ್ಯಕ್ಕೆ ಆರಂಭವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ.
ಎಸ್ಆರ್ಕೆ, ಆರ್ಡಿಎಕ್ಸ್ ಸಿನಿಮಾಗಳ ಬಗ್ಗೆ ಶಿವರಾಜಕುಮಾರ್ ಅವರನ್ನು ಕೇಳಿದರೆ, ಆ ಚಿತ್ರಗಳು ಸದ್ಯಕ್ಕಿಲ್ಲ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ. ಈ ಸಿನಿಮಾಗಳ ಪೈಕಿ 'ಎಸ್ಆರ್ಕೆ' ಸಿನಿಮಾ ಬಗ್ಗೆ ಕಳೆದ ಮೂರು ವರ್ಷಗಳಿಂದ ಪ್ರಸ್ತಾಪ ಆಗುತ್ತಲೇ ಇದೆ. ಡಾ. ರಾಜ್‍ಕುಮಾರ್ ಅವರ ತಂಗಿ ನಾಗಮ್ಮ ಮೊಮ್ಮಗ ಲಕ್ಕಿ ಗೋಪಾಲ್ ಈ ಚಿತ್ರದ ಮೂಲಕ ನಿರ್ದೇಶಕರಾಗಬೇಕಿತ್ತು. ಮಂತ್ರಿ ಮಾಲ್‍ನಲ್ಲಿ ಚಿತ್ರದ ಮುಹೂರ್ತವೂ ಆಗಿತ್ತು. ಡಾ. ರಾಜ್‍ಕುಮಾರ್ ಕುಟುಂಬದವರೆಲ್ಲರೂ ಭಾಗವಹಿಸಿದ್ದ ಈ ಸಮಾರಂಭ ಸಾಕಷ್ಟು ಸುದ್ದಿಯೇನೋ ಮಾಡಿತ್ತು. ಆದರೆ, ನಂತರ ಚಿತ್ರ ಏನಾಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಚಿತ್ರ ನಿಂತಿದೆ ಎಂದು ತಮ್ಮ ಆಪ್ತರ ಬಳಿ ಲಕ್ಕಿ ಗೋಪಾಲ್ ಖಚಿತ ಪಡಿಸಿದ್ದಾರೆ ಎಂದು ಹೇಳಲಾಗಿದೆ. ಲಕ್ಕಿ ಗೋಪಾಲ್ ಸದ್ಯಕ್ಕೆ ನಿರ್ದೇಶನವನ್ನು ಬಿಟ್ಟು ಇದೀಗ ದುನಿಯಾ ವಿಜಯ್ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.
ಅದೇ ರೀತಿ ತಮಿಳಿನ ಸತ್ಯಜ್ಯೋತಿ ಫಿಲಂಸ್‍ನಲ್ಲಿ ನಿರ್ಮಾಣವಾಗಬೇಕಿದ್ದ 'ಆರ್ಡಿಎಕ್ಸ್' ಚಿತ್ರವು ಈ ವರ್ಷದ ಫೆಬ್ರವರಿಯಲ್ಲಿ ಪ್ರಾರಂಭವಾಗಿತ್ತು. ಫೆಬ್ರವರಿ 19 ರಂದು ಶಿವಣ್ಣ ಅಭಿನಯದ 'ಆನಂದ್' ಚಿತ್ರ ಸೆಟ್ಟೇರಿದ್ದರಿಂದ, ಅದೇ ದಿನ ಚಿತ್ರವನ್ನು ಪ್ರಾರಂಭಿಸಲಾಗಿತ್ತು. ರವಿ ಅರಸು ಎನ್ನುವವರು ನಿರ್ದೇಶಿಸಬೇಕಿದ್ದ ಈ ಚಿತ್ರದ ಮುಹೂರ್ತ ಕೂಡಾ ನಡೆದು ಶಿವರಾಜಕುಮಾರ್ ಕೂಡಾ ಚಿತ್ರದ ಸ್ಕ್ರಿಪ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದರೆ ಈಗ ಈ ಸಿನಿಮಾಗಳ ಸುದ್ದಿಯೇ ಇಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ 'ಭಜರಂಗಿ 2' ಚಿತ್ರೀಕರಣ ಮುಗಿದು 'ಆರ್ಡಿಎಕ್ಸ್' ಚಿತ್ರೀಕರಣದಲ್ಲಿ ಶಿವಣ್ಣ ಭಾಗವಹಿಸಬೇಕಿತ್ತು. ಆದರೆ ಸದ್ಯಕ್ಕೆ 'ಶಿವಪ್ಪ' ಚಿತ್ರದ ಕಡೆ ಶಿವರಾಜ್ಕುಮಾರ್ ಗಮನ ನೀಡಿದ್ದಾರೆ. ಈ ಎರಡೂ ಸಿನಿಮಾಗಳು ನಿಧಾನವಾಗಿ ಆರಂಭವಾಗಲಿದೆಯಾ ಅಥವಾ ಖಾಯಂ ಆಗಿ ನಿಂತುಹೋಗಿದೆಯಾ ಎಂಬುದು ಕೆಲವೇ ದಿನಗಳಲ್ಲಿ ತಿಳಿಯಲಿದೆ.