ಚಾಮರಾಜನಗರ: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶನಿ' ಧಾರಾವಾಹಿಯಲ್ಲಿ ಬಾಲಶನಿ ಪಾತ್ರಧಾರಿ ಎಲ್ಲರಿಗೂ ಪರಿಚಿತ. ಈತನ ಹೆಸರು ಸುನಿಲ್. ಮೂಲತಃ: ಚಾಮರಾಜನಗರದ ಹುಡುಗ.
ಧಾರಾವಾಹಿ ಮುಗಿದ ನಂತರ ಇದೀಗ ಸುನಿಲ್ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಚಾಮರಾಜನಗರದ ದೀನಬಂಧು ಅನಾಥಾಶ್ರಮದಲ್ಲೇ ಬೆಳೆದು ದೊಡ್ಡವನಾದ ಸುನಿಲ್ ಇಂದಿಗೂ ಅಲ್ಲೇ ಇದ್ದಾರೆ. ಈ ಟಿವಿ ಭಾರತ್ ಜೊತೆ ಸುನಿಲ್ ಮಾತನಾಡಿದ್ದಾರೆ. ಸುನಿಲ್ಗಿಂತ ಚಿಕ್ಕ ಹುಡುಗರು ಅವರನ್ನು ಶನಿಯಣ್ಣ ಎಂದು ಕರೆಯುತ್ತಾರಂತೆ. ಧಾರಾವಾಹಿಯಲ್ಲಿ ನಟಿಸುವ ಮುನ್ನ ಶಾಲೆಯಲ್ಲಿ ಹೇಗಿದ್ದೆನೋ ಈಗಲೂ ಅದೇ ರೀತಿ ಕ್ರಿಕೆಟ್ ಆಡುತ್ತೇನೆ. ಹೊಲದ ಕೆಲಸ ಮಾಡುತ್ತೇನೆ ತಕಧಿಮಿತ ಡ್ಯಾನ್ಸಿಂಗ್ ಶೋ ಬಳಿಕ ಈಗ ಬಿಡುವಾಗಿದ್ದೇನೆ ಎಂದಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ಆಫರ್ ಬಂದಿದೆ. ಆದರೆ ಯಾವುದನ್ನೂ ಒಪ್ಪಿಕೊಂಡಿಲ್ಲ. ಪರೀಕ್ಷೆ ವೇಳೆಯಲ್ಲೇ ಶೂಟಿಂಗ್ ಜರುಗಿದ್ದರಿಂದ ಶಿಕ್ಷಣ ಮುಂದುವರಿಸಲು ಆಗಲಿಲ್ಲ ಎಂದರು.
ದೀನಬಂಧು ಮುಖಸ್ಥ ಜಯದೇವ್ ಮಾತನಾಡಿ, ಸುನಿಲ್ ಅಂದು ಹೇಗಿದ್ದನೋ ಧಾರಾವಾಹಿಯಲ್ಲಿ ನಟಿಸಿದ ಮೇಲೂ ಹಾಗೇ ಇದ್ದಾನೆ. ಓದು ಮುಂದುವರೆಸು ಎಂದು ಸುನಿಲ್ಗೆ ಹೇಳುತ್ತಿದ್ದೇನೆ. ಈ ಸಂಸ್ಥೆ ಆತನಿಗೆ ಎಲ್ಲವನ್ನೂ ನೀಡಿದೆ. ಇಲ್ಲಿನ ಹುಡುಗರೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಾನೆ ಎಂದು ಹೇಳಿದರು.