ಇಂದು ಕನ್ನಡ ಚಿತ್ರರಂಗದ ಮೇರುನಟ, ದಿವಂಗತ ಸಾಹಸ ಸಿಂಹ ವಿಷ್ಣುವರ್ಧನ್ ಅವರ 69ನೇ ಹುಟ್ಟುಹಬ್ಬ. ಪ್ರತಿ ವರ್ಷದಂತೆ ಈ ವರ್ಷವೂ ವಿಷ್ಣು ದಾದಾ ಬರ್ತ್ ಡೇಯನ್ನ ಅದ್ಧೂರಿಯಾಗಿ ಆಚರಿಸಲು ವಿಷ್ಣು ಫ್ಯಾನ್ಸ್ ರೆಡಿಯಾಗಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಬಳಿ ವಿಷ್ಣು ಹುಟ್ಟು ಹಬ್ಬ ಆಚರಿಸಲು ಸಾಹಸ ಸಿಂಹನ ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ವಿಷ್ಣು ಸಮಾಧಿಗೆ ಹೂವಿನಿಂದ ಅಲಂಕರಿಸಿದ್ದು, ಮಧ್ಯಾಹ್ನದ ವೇಳೆಗೆ ಅನ್ನದಾನ, ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ. ಅಲ್ಲದೆ ಈಗಾಗ್ಲೇ ವಿಷ್ಣು ಸಮಾಧಿ ಬಳಿ ಸಾವಿರಾರು ಅಭಿಮಾನಿಗಳು ಬರ್ತಿದ್ದು, ವಿಷ್ಣು ವರ್ಧನ್ ಸಮಾಧಿ ಸಮೀಪ ಬ್ಯಾರಿಕೇಡ್ಗಳ ಅಳವಡಿಸಿ ಪೂಜೆ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
ಸ್ಟುಡಿಯೋ ಸ್ಥಳದಲ್ಲಿ ಪೊಲೀಸರು ಇದ್ದು ಯಾವುದೇ ಅಹಿತರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ವಿಶೇಷ ಅಂದ್ರೆ ಈ ಬಾರಿ ಮೈಸೂರಿನಲ್ಲಿ ವಿಷ್ಣು ಸ್ಮಾರಕಕ್ಕೆ ಚಾಲನೆ ದೊರೆತಿದ್ದು, ವಿಷ್ಣು ಕುಟುಂಬ ಮೈಸೂರಿನಲ್ಲಿ ವಿಷ್ಣುವರ್ಧನ್ ಹುಟ್ಟು ಹಬ್ಬವನ್ನು ಅಚರಿಸಲಿದ್ದಾರೆ. ಪ್ರತಿವರ್ಷ ಭಾರತಿ ವಿಷ್ಣುವರ್ಧನ್ ಅಭಿಮಾನಿಗಳ ಜೊತೆ ಸಾಹಸ ಸಿಂಹನ ಹುಟ್ಟುಹಬ್ಬವನ್ನು ಜಯನಗರ ನಿವಾಸದಲ್ಲಿ ಆಚರಿಸುತ್ತಿದ್ದರು. ಅಲ್ಲದೇ ಈ ಬಾರಿ ವಿಷ್ಣುವರ್ಧನ್ ಅಭಿಮಾನಿಗಳು ವಿಷ್ಣು ಬರ್ತ್ ಡೇ ಸ್ಪೆಷಲ್ ಆಗಿ ಮೂರು ದಿನಗಳು ರವೀಂದ್ರ ಕಲಾಕ್ಷೇತ್ರದಲ್ಲಿ ವಿಷ್ಣು ನಾಟಕೋತ್ಸವ ಏರ್ಪಡಿಸಿದ್ದು, ಇಂದು ವಾಣಿಜ್ಯ ಮಂಡಳಿಯಲ್ಲಿರುವ ವಿಷ್ಣುವರ್ಧನ್ ಅವರ ಫೋಟೋಗೆ ಪೂಜೆಸಲ್ಲಿಸುವ ಮೂಲಕ ವಿಷ್ಣು ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.