ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದಲ್ಲಿ ಫೇಜ್ ಥ್ರೀ ಪಾರ್ಟಿ ಆಯೋಜನೆ ಮಾಡ್ತಿದ್ದ ವಿರೇನ್ ಖನ್ನಾ ತನಿಖೆಗೆ ಸರಿಯಾಗಿ ಸಹಕರಿಸದ ಕಾರಣ ಸಿಸಿಬಿ ಪೊಲೀಸರು ನ್ಯಾಯಾಲಯದ ಅನುಮತಿ ಪಡೆದು ನಾರ್ಕೋ ಟೆಸ್ಟ್ ಮಾಡಲು ಮುಂದಾಗಿದ್ರು. ಆದರೆ ಸದ್ಯ ವಿರೇನ್ ಖನ್ನಾ ಇದಕ್ಕೆ ಒಪ್ಪುತ್ತಿಲ್ಲ ಎಂದು ಹೇಳಲಾಗ್ತಿದೆ.
ಸದ್ಯ ವಿರೇನ್ ಖನ್ನಾಗೆ ಸಿಸಿಬಿ ಪೊಲೀಸರು ವಾಸ್ತವ ವಿಚಾರದ ಬಗ್ಗೆ ತಿಳಿ ಹೇಳ್ತಿದ್ದಾರೆ. ಪ್ರಕರಣದಲ್ಲಿ ಪಾತ್ರ ಇರುವುದು ಸ್ಪಷ್ಟವಾಗಿದೆ. ಹೀಗಾಗಿ ವಿರೇನ್ ಖನ್ನಾ ಮೊಬೈಲ್ನ ಪಾಸ್ ವರ್ಡ್ ನೀಡುವಂತೆ ಕೇಳಿದ್ದಾರೆ. ಒಂದು ವೇಳೆ ಸರಿಯಾದ ರೀತಿ ಸಹಕರಿಸದಿದ್ದರೆ ಜೀವನ ಪೂರ್ತಿ ಜೈಲಲ್ಲೇ ಇರಬೇಕಾಗುತ್ತದೆ. ಜಾಮೀನು ಸಿಗುವುದು ಕಷ್ಟವೆಂದೂ ಮನವರಿಕೆ ಮಾಡಿಸಿದ್ದಾರೆ.
ನಾರ್ಕೋ ಟೆಸ್ಟ್ಗೆ ಒಳಗಾಗುವ ಆರೋಪಿಗಳ ಒಪ್ಪಿಗೆ ಅನಿವಾರ್ಯವಾಗಿರುತ್ತದೆ. ಆದರೆ ವಿರೇನ್ ಖನ್ನಾ ಇತ್ತ ವಿಚಾರಣೆಗೂ ಸಹಕರಿಸದೆ, ನಾರ್ಕೋ ಟೆಸ್ಟ್ಗೂ ಅನುಮತಿ ನೀಡದೆ ಸಿಸಿಬಿಗೆ ತಲೆನೋವಾಗಿದ್ದಾನೆ. ಹೀಗಾಗಿ ಸಿಸಿಬಿ ಪೊಲೀಸರು ವೈದ್ಯರ ಮುಖಾಂತರ ಖನ್ನಾಗೆ ನಾರ್ಕೋ ಟೆಸ್ಟ್ ಬಗ್ಗೆ ತಿಳುವಳಿಕೆ ಹೇಳಿಸಲು ಮುಂದಾಗಿದ್ದಾರೆ.
ಒಂದು ವೇಳೆ ಖನ್ನಾ ಒಪ್ಪಿಗೆ ನೀಡಿದರೆ ಮಾತ್ರ ಈ ಟೆಸ್ಟ್ ನಡೆಸಲಾಗುವುದು. ಸದ್ಯ ಬೆಂಗಳೂರಿನಲ್ಲಿ ನಾರ್ಕೋ ಟೆಸ್ಟ್ ಇಲ್ಲದ ಕಾರಣ ಅಹಮದಾಬಾದ್ ಅಥವಾ ಹೈದರಾಬಾದ್ಗೆ ಆತನನ್ನು ಕರೆದೊಯ್ಯಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ನವೀನ್ ಕೂಡ ವೈದ್ಯರ ಎದುರು ಒಪ್ಪಿಗೆ ನೀಡಿ ನಂತರ ಹೈದರಾಬಾದ್ಗೆ ಕರೆದೊಯ್ದಾಗ ನಿರಾಕರಿಸಿದ್ದ. ಅದೇ ರೀತಿ ವಿರೇನ್ ಖನ್ನಾ ನಡೆದುಕೊಳ್ಳಬಾರದೆಂಬ ಕಾರಣಕ್ಕೆ ಆತನಿಗೆ ವಾಸ್ತವಾಂಶವನ್ನು ಸಿಸಿಬಿ ಅಧಿಕಾರಿಗಳು ಬಿಡಿಸಿ ಹೇಳ್ತಿದ್ದಾರೆ.
ಮತ್ತೊಂದೆಡೆ ವಿರೇನ್ ಖನ್ನಾ ಪೋಷಕರನ್ನ ಕೂಡ ಸಿಸಿಬಿ ಕಚೇರಿಗೆ ಕರೆಯಿಸಿ ವಿಚಾರಣೆ ನಡೆಸ್ತಿದ್ದಾರೆ. ವಿರೇನ್ ಖನ್ನಾ ಸಿಸಿಬಿ ಕಸ್ಟಡಿಯಲ್ಲಿದ್ದಾಗ ಸಿಸಿಬಿ ಎಸಿಪಿಗೆ ಲಂಚ ಕೊಟ್ಟು ಮಗನ ತನಿಖೆ ವಿಚಾರವನ್ನ ಪಡೆದು ತಮ್ಮ ವಕೀಲರಿಗೆ ನೀಡಿದ್ರು ಎನ್ನಲಾಗ್ತಿದೆ. ಹೀಗಾಗಿ ಖನ್ನಾ ಪೋಷಕರು ಈಗ ವಿಚಾರಣೆ ಎದುರಿಸುತ್ತಿದ್ದಾರೆ.
ಈ ವಿರೇನ್ ಖನ್ನಾ ಫೇಜ್ ಥ್ರೀ ಪಾರ್ಟಿ ಆಯೋಜಕನಾಗಿದ್ದು, ಪೊಲಿಸರ ಸಮವಸ್ತ್ರ ಧರಿಸಿ ಪಾರ್ಟಿಯಲ್ಲಿ ಭಾಗಿಯಾಗ್ತಿದ್ದ. ಸದ್ಯ ಈತ ಪ್ರಕರಣದಲ್ಲಿ ಹಲವಾರು ವಿಚಾರಗಳನ್ನ ಬಾಯ್ಬಿಡದೇ ಸಿಸಿಬಿ ತನಿಖೆಗೆ ತೊಂದರೆ ನೀಡ್ತಿದ್ದಾನೆ ಎಂದು ಹೇಳಲಾಗ್ತಿದೆ.