ರಾಬರ್ಟ್ ಚಿತ್ರದಿಂದ ದರ್ಶನ್ ಅವರಿಗೆ ಅದೆಷ್ಟು ಬೇಡಿಕೆ ಹೆಚ್ಚಾಗಿದೆಯೋ, ಅವರ ಸ್ನೇಹಿತನ ಪಾತ್ರದಲ್ಲಿ ಕಾಣಿಸಿದ್ದ ವಿನೋದ್ ಪ್ರಭಾಕರ್ ಅವರಿಗೂ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಹೆಚ್ಚಾಗಿದೆ. ರಾಬರ್ಟ್ ಬಿಡಗುಡೆಯ ನಂತರ ಈಗಾಗಲೇ ಲಂಕಾಸುರ ಎಂಬ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹೀರೋ ಆಗಿ ನಟಿಸುತ್ತಿದ್ದಾರೆ. ಅದಲ್ಲದೆ, ಅವರು ವರದ ಎಂಬ ಇನ್ನೂ ಒಂದು ಚಿತ್ರವನ್ನು ಸದ್ದಿಲ್ಲದೆ ಮುಗಿಸಿದ್ದಾರೆ ಎಂಬ ಸುದ್ದಿಯೊಂದು ಇದೀಗ ಹೊರ ಬಿದ್ದಿದೆ.
ಲಾಕ್ಡೌನ್ಗೂ ಮುನ್ನವೇ ವರದ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿತ್ತಂತೆ. ಚಿತ್ರೀಕರಣ ಸಂಪೂರ್ಣವಾಗಿ ಮುಗಿದ ಮೇಲೆ ಪ್ರಚಾರ ಶುರು ಮಾಡೋಣ ಅಂತ ಚಿತ್ರತಂಡ ಪ್ಲಾನ್ ಮಾಡಿತ್ತು. ಸದ್ಯದಲ್ಲೇ ಚಿತ್ರತಂಡವು ಮೋಷನ್ ಪೋಸ್ಟರ್ ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.
ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರ. ವಿನೋದ್ ಪ್ರಭಾಕರ್ ಅವರ ಅಭಿಮಾನಿಗಳು ಬಯಸುವ ಹಾಗೆ, ಒಂದು ಆ್ಯಕ್ಷನ್ ಚಿತ್ರವನ್ನು ಮಾಡಿದ್ದಾರೆ ನಿರ್ದೇಶಕ ಉದಯ ಪ್ರಕಾಶ್. ಗಣೇಶ್ ಅಭಿನಯದ ಆಟೋರಾಜ ನಂತರ ಪ್ರಕಾಶ್ ಯಾವೊಂದು ಸಿನಿಮಾ ಸಹ ಮಾಡಿರಲಿಲ್ಲ. ಉಪೇಂದ್ರ ಅಭಿನಯದ ಚಿತ್ರವೊಂದನ್ನು ಅವರು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಇತ್ತಾದರೂ, ಅದು ಸಾಧ್ಯವಾಗಲಿಲ್ಲ. ಈಗ ಅವರು ವಿನೋದ್ ಪ್ರಭಾಕರ್ ಅಭಿನಯದಲ್ಲೊಂದು ಆ್ಯಕ್ಷನ್ ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ.
ಇದು ಬರೀ ಆ್ಯಕ್ಷನ್ ಚಿತ್ರ ಎಂದು ಹೇಳುವುದೂ ಕಷ್ಟ. ಏಕೆಂದರೆ, ಚಿತ್ರದಲ್ಲಿ ಅಪ್ಪ-ಮಗನ ನಡುವಿನ ಸೆಂಟಿಮೆಂಟ್ ಸಹ ಬಹಳ ಮುಖ್ಯವಾಗಿ ಬರುತ್ತಂತೆ. ಚಿತ್ರದಲ್ಲಿ ಚರಣ್ ರಾಜ್ ತಂದೆಯಾಗಿ ಕಾಣಿಸಿಕೊಂಡರೆ, ನಾಯಕಿಯಾಗಿ ಅಮಿತಾ ರಂಗನಾಥ್ ನಟಿಸಿದ್ದಾರೆ. ಜತೆಗೆ ಅನಿಲ್ ಸಿದ್ದು, ಅಶ್ವಿನಿ ಗೌಡ ಮುಂತಾದವರು ನಟಿಸಿದ್ದಾರೆ.
ಪ್ರದಿಪ್ ವರ್ಮಾ ಸಂಗೀತ ಸಂಯೋಜಿಸಿದರೆ, ಭಜರಂಗಿ ಆನಂದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಈಗಾಗಲೇ ಬೆಂಗಳೂರು, ಕುಂದಾಪುರ, ಉಡುಪಿ ಮುಂತಾದ ಕಡೆ ಚಿತ್ರೀಕರಣ ಮುಗಿದಿದ್ದು, ಎಲ್ಲ ಅಂದುಕೊಂಡಂತೆ ಆದರೆ, ಚಿತ್ರ ಇದೇ ವರ್ಷ ಬಿಡುಗಡೆಯಾಗಲಿದೆ.