ಕನ್ನಡದಲ್ಲಿ ಬಯೋಪಿಕ್ವೊಂದು ನಿರ್ಮಾಣವಾಗಿ ಬಹಳ ದಿನಗಳೇ ಆಗಿವೆ. ಈಗ ಸಾರಿಗೆ ಮತ್ತು ಮಾಧ್ಯಮ ಲೋಕದಲ್ಲಿ ಮುಂಚೂಣಿಯಲ್ಲಿರುವ ವಿಆರ್‌ಎಲ್ ಸಮೂಹದ ಅಧ್ಯಕ್ಷ ಪದ್ಮಶ್ರೀ ಪುರಸ್ಕೃತ ಡಾ.ವಿಜಯ್ ಸಂಕೇಶ್ವರ್ ಬಯೋಪಿಕ್ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ 'ವಿಜಯಾನಂದ' ಎಂಬ ಹೆಸರಿಡಲಾಗಿದ್ದು, ವಿಜಯ್ ಸಂಕೇಶ್ವರ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದೆ.
1976ರಲ್ಲಿ ಕೇವಲ ಒಂದು ಟ್ರಕ್ನಿಂದ ಆರಂಭವಾದ ವಿಜಯ ಸಂಕೇಶ್ವರ ಅವರ ವಿಆರ್‌ಎಲ್ ಪಯಣ, ಇದೀಗ ದೇಶದಲ್ಲೇ ಅತೀ ದೊಡ್ಡ ಲಾಜಿಸ್ಟಿಕ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಾಧನೆಯ ಹಿಂದಿನ ರೋಚಕ ಕಥೆಯನ್ನು ಕಮರ್ಷಿಯಲ್ ಆಗಿ ತೋರಿಸುವ ಪ್ರಯತ್ನ ಮಾಡಲಾಗ್ತಿದೆ. ಈ ಚಿತ್ರವನ್ನು ವಿಆರ್‌ಎಲ್ ಫಿಲಂ ಪ್ರೊಡಕ್ಷನ್ಸ್ ಸಂಸ್ಥೆಯಡಿ ವಿಜಯ್ ಸಂಕೇಶ್ವರ ಅವರ ಮಗ ಆನಂದ್ ಸಂಕೇಶ್ವರ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಿಂದೆ ಟ್ರಂಕ್ ಎಂಬ ಹಾರರ್ ಸಿನಿಮಾ ನಿರ್ದೇಶಿಸಿದ್ದ ರಿಶಿಕಾ ಶರ್ಮಾ, ಈ ಬಯೋಪಿಕ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ವಿಜಯ್ ಸಂಕೇಶ್ವರ ಅವರ ಪಾತ್ರಕ್ಕೆ ನಿಹಾಲ್ ರಜಪೂತ್ ಬಣ್ಣ ಹಚ್ಚುತ್ತಿದ್ದಾರೆ. ನಿಹಾಲ್ ಈ ಹಿಂದೆ ಟ್ರಂಕ್ ಮತ್ತು ಚೌಕ ಚಿತ್ರಗಳಲ್ಲಿ ನಟಿಸಿದ್ದರು. ಈಗ ಪೂರ್ಣಪ್ರಮಾಣದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಚಿತ್ರದ ಪ್ರೀಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, ಆಗಸ್ಟ್ ಕೊನೆಯಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
ವಿಜಯಾನಂದ ಚಿತ್ರಕ್ಕೆ ಮಲಯಾಳಂನ ಜನಪ್ರಿಯ ಸಂಗೀತ ನಿರ್ದೇಶಕ ಗೋಪಿ ಸುಂದರ್ ಸಂಗೀತ ಸಂಯೋಜಿಸಿದರೆ, ಕೀರ್ತನ್ ಪೂಜಾರಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರವು 2022ರಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಪಂಚಭಾಷಾ ಧಾರಾವಾಹಿಯಲ್ಲಿ ಮಿಂಚುತ್ತಿರುವ ಕನ್ನಡದ ‘ಜ್ಯೋತಿ’