ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬಂದ ಪಂಚತಂತ್ರ ಸಿನಿಮಾ ಮೂಲಕ ಹೆಸರು ಗಿಟ್ಟಿಸಿಕೊಂಡ ನಟ ವಿಹಾನ್ ಗೌಡ ಇದೀಗ ಮತ್ತೊಂದು ಸಿನಿಮಾದಲ್ಲಿ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಈ ಸಿನಿಮಾವನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಯಾಂಪಿನಲ್ಲಿ ಸಹಾಯಕ ನಿರ್ದೇಶಕನಾಗಿದ್ದ ಎಂ.ಸುಭಾಷ್ ಚಂದ್ರ ನಿರ್ದೇಶನ ಮಾಡುತ್ತಿದ್ದಾರೆ. ಆದ್ರೆ ವಿಹಾನ್ ಗೌಡ ನಟಿಸುತ್ತಿರುವ ಈ ಚಿತ್ರಕ್ಕೆ ಹೆಸರು ಇನ್ನೂ ನಿರ್ಧಾರವಾಗಿಲ್ಲ.
ನಿರ್ದೇಶಕ ಸುಭಾಷ್ ಚಂದ್ರ, ದರ್ಶನ್ ಅವರ ಆಫೀಸಿಯಲ್ ಫ್ಯಾನ್ ಪೇಜ್ ಡಿ ಕಂಪನಿಯ ಅಡ್ಮಿನ್ ಆಗಿ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಇವರ ಆಸಕ್ತಿ ಹಾಗೂ ಶ್ರದ್ಧೆ ಗಮನಿಸಿ ‘ಕುರುಕ್ಷೇತ್ರ’ ಸಿನಿಮಾದಲ್ಲಿ ಕೆಲಸ ಮಾಡಲು ದರ್ಶನ್ ಅವಕಾಶ ಕಲ್ಪಿಸಿದ್ದರು.
ಈ ಸಿನಿಮಾ ಶೂಟಿಂಗ್ ಮುಂಬರುವ ಜನವರಿಯಿಂದ ಶುರುವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಬೆಂಗಳೂರು, ಮದ್ದೂರು, ದೊಡ್ಡಬಳ್ಳಾಪುರ, ಮಡಿಕೇರಿ ಹಾಗೂ ರಾಮನಗರದಲ್ಲಿ ಶೂಟಿಂಗ್ ಮಾಡಲಾಗುತ್ತದೆಯಂತೆ.
ಈ ಸಿನಿಮಾ 1990ರಿಂದ 2019ರ ಸಮಯದಲ್ಲಿ ಬರಹಗಾರನೊಬ್ಬನ ಜೀವನದ ಕಥೆಯನ್ನು ಹೇಳುತ್ತದೆಯಂತೆ. ಚಿತ್ರಕ್ಕಾಗಿ ನಾಯಕಿಯ ಹುಡುಕಾಟ ನಡೆಯುತ್ತಿದೆ. ಸಿನಿಮಾಕ್ಕೆ ಎ.ಆರ್.ರೆಹಮಾನ್ ಸಹಾಯಕ, ಸುರೇಶ್ ರಾಜ್ ಸಂಗೀತ ನೀಡುತ್ತಿದ್ದು, ಜಯಂತ್ ಕಾಯ್ಕಿಣಿ ಹಾಗೂ ಡಾ. ವಿ.ನಾಗೇಂದ್ರ ಪ್ರಸಾದ್ ಗೀತ ರಚನೆ ಮಾಡಲಿದ್ದಾರೆ.