ರೀಮೇಕ್ ಹಾಗೂ ಡಬ್ಬಿಂಗ್ ಚಿತ್ರಗಳಿಂದ ಕನ್ನಡ ಚಿತ್ರರಂಗಕ್ಕೆ ಯಾವುದೇ ಪ್ರಯೋಜನವಿಲ್ಲ. ಸ್ಯಾಂಡಲ್ವುಡ್ ಉಳಿಯಬೇಕು, ಬೆಳೆಯಬೇಕು ಎಂದಾದಲ್ಲಿ ಎಲ್ಲರಲ್ಲೂ ಒಳ್ಳೆಯ ಮನೋಭಾವ ಬೆಳೆಯಬೇಕು ಎಂದು ಹಿರಿಯ ನಟ ಶಿವರಾಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ದೇವರು ಬೇಕಾಗಿದ್ದಾರೆ' ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಂದು ಚಿತ್ರ ಗೆದ್ದರೆ ಎಲ್ಲರೂ ಆ ಸಕ್ಸಸ್ ಹಂಚಿಕೊಂಡು ಹೇಗೆ ಸಂಭ್ರಮಿಸುತ್ತಾರೋ ಒಂದು ಸಿನಿಮಾ ಸೋತಾಗ ಕೂಡಾ ಎಲ್ಲರೂ ಆ ಹೊಣೆಯನ್ನು ಹೊರಬೇಕು. ಆದರೆ ಇಲ್ಲಿ ಕೇವಲ ನಿರ್ಮಾಪಕ ಮಾತ್ರ ಈ ಬಗ್ಗೆ ಚಿಂತಿಸುತ್ತಾನೆ. ಇತರರು ಸೋತ ಚಿತ್ರಗಳ ಬಗ್ಗೆ ವ್ಯಂಗ್ಯವಾಡಿದರೆ ಯಾವ ಚಿತ್ರರಂಗ ಕೂಡಾ ಬೆಳೆಯುವುದಿಲ್ಲ. ಕನ್ನಡ ಚಿತ್ರರಂಗ ಬೆಳೆಯುತ್ತಿರುವ ಯಾವುದೇ ಮುನ್ಸೂಚನೆ ಕೂಡಾ ಕಾಣುತ್ತಿಲ್ಲ ಎಂದು ಅವರು ಹೇಳಿದರು.
ರೀಮೇಕ್ ಚಿತ್ರಗಳಿಂದ ಯಾರು ಬೆಳೆಯುತ್ತಿದ್ದಾರೆ..? ರೀಮೇಕ್ ಚಿತ್ರಗಳಿಂದ ನಾಯಕ ಹಾಗೂ ನಿರ್ದೇಶಕರ ನಡುವೆ ವಿವಾದ ಆಗಿರುವುದನ್ನು ನಾನು ನೋಡಿದ್ದೇನೆ. ಇನ್ನು ಡಬ್ಬಿಂಗ್ ಚಿತ್ರಗಳಿಂದ ಕೂಡಾ ಯಾವುದೇ ಪ್ರಯೋಜನವಿಲ್ಲ. ವೃತ್ತಿ ರಂಗಭೂಮಿ ಕಣ್ಮರೆಯಾಗುತ್ತಿದೆ. ನಮ್ಮ ಭಾಷಾ ವ್ಯಾಮೋಹ ಕಡಿಮೆಯಾಗಿದೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ. ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವ ಸಂಸ್ಕತಿ ಬೆಳೆಯಬೇಕು. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮೊದಲು ಈ ಸಮಸ್ಯೆಗಳನ್ನು ಬಗೆಹರಿಸಲು ಯಾರಾದರೂ ಮುಂದೆ ಬಂದರೆ ಶಿರಸಾವಹಿಸಿ ಅವರ ಜೊತೆ ನಿಲ್ಲುತ್ತೇನೆ ಎಂದು ಹೇಳುವ ಮೂಲಕ ಶಿವರಾಂ ಕನ್ನಡ ಚಿತ್ರರಂಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.