ಇಂದು ಹಿರಿಯ ನಟ ಅನಂತ್ ನಾಗ್ ಹುಟ್ಟುಹಬ್ಬ. 1948 ರಲ್ಲಿ ಮುಂಬೈನಲ್ಲಿ ಕೊಂಕಣಿ ಕುಟುಂಬದಲ್ಲಿ ಜನಿಸಿದ ನಟ ಅನಂತ್ ನಾಗ್ ಮೊದಲ ಹೆಸರು ಅನಂತ್ ನಾಗರಕಟ್ಟೆ. ಮೊದಲ ಹೆಸರು. ಆನಂದಿ ಹಾಗೂ ಸದಾನಂದ್ ನಾಗರಕಟ್ಟೆ ಇವರ ತಂದೆ-ತಾಯಿಗಳು.
ಚಿಕ್ಕಂದಿನಲ್ಲೇ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಅನಂತ್ ನಾಗ್ 1973 ರಲ್ಲಿ ಸಂಕಲ್ಪ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ದೇವರ ಕಣ್ಣು, ಬಯಲು ದಾರಿ, ಚಂದನದ ಗೊಂಬೆ, ನಾರದ ವಿಜಯ, ಬೆಂಕಿಯ ಬಲೆ, ನಾ ನಿನ್ನ ಬಿಡಲಾರೆ, ಒಲವು ಮೂಡಿದಾಗ, ಅನುಪಮ ಸೇರಿ ಸುಮಾರು 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರತಿ ಸಿನಿಮಾದಲ್ಲೂ ಅವರ ಅಭಿನಯ ಕಣ್ಣಿಗೆ ಕಟ್ಟುವಂತಿದೆ. ಕನ್ನಡ ಮಾತ್ರವಲ್ಲ ಹಿಂದಿ , ತೆಲುಗು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲ ಮಾಲ್ಗುಡಿ ಡೇಸ್, ಗರ್ವ, ಪ್ರೀತಿ ಇಲ್ಲದ ಮೇಲೆ, ಚಿಟ್ಟೆ ಹೆಜ್ಜೆ ಸೇರಿ ಕೆಲವೊಂದು ಧಾರಾವಾಹಿಗಳಲ್ಲಿ ಕೂಡಾ ಅನಂತ್ ನಾಗ್ ಅಭಿನಯಿಸಿದ್ದಾರೆ. 1987 ರಲ್ಲಿ ನಟಿ ಗಾಯತ್ರಿ ಅವರ ಕೈ ಹಿಡಿದ ಅನಂತ್ ನಾಗ್ ದಂಪತಿಗೆ ಅದಿತಿ ಎಂಬ ಮಗಳಿದ್ದಾರೆ.
ಸಿನಿಮಾ ಜೊತೆಗೆ ಅನಂತ್ ನಾಗ್ ರಾಜಕೀಯ ಜೀವನದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 1994 ರ ಚುನಾವಣೆಯಲ್ಲಿ ಮಲ್ಲೇಶ್ವರಂ ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿದ್ದ ಅನಂತ್ ನಾಗ್ ಜೆ.ಹೆಚ್. ಪಟೇಲ್ ಕ್ಯಾಬಿನೆಟ್ನಲ್ಲಿ ಬಿಡಿಎ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ ಈ ಮಹಾನ್ ನಟನಿಗೆ ಈ ಟಿವಿ ಭಾರತ್ ವತಿಯಿಂದ ಹುಟ್ಟುಹಬ್ಬದ ಶುಭಾಶಯಗಳು.