ದಂತಚೋರ ವೀರಪ್ಪನ್ ಜೀವನಾಧಾರಿತ ‘ಅಟ್ಟಹಾಸ’ ಸಿನಿಮಾ ಮಾಡಿದ್ದ ನಿರ್ದೇಶಕ ಎಎಂಆರ್ ರಮೇಶ್ ಈಗ, ವೆಬ್ ಸಿರೀಸ್ ಮೂಲಕ ಕಾಡುಗಳ್ಳನ ಕಥೆ ಹೇಳಲಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ನಿರ್ದೇಶಕ ಎಎಂಆರ್ ರಮೇಶ್, ಈಗಾಗಲೇ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದೆ. ಅಗಸ್ಟ್ 10ರಿಂದ ವೀರಪ್ಪನ್ ವೆಬ್ ಸಿರೀಸ್ ಶೂಟಿಂಗ್ ಶುರು ಮಾಡುವುದಾಗಿ ತಿಳಿಸಿದರು.
ಅಟ್ಟಹಾಸ ಚಿತ್ರದಲ್ಲಿ ಕೆಲ ವಿಷಯಗಳನ್ನು ಹೇಳಲು ನನಗೆ ಆಗಿರಲಿಲ್ಲ. ಆದರೆ, ಈಗ ವೀರಪ್ಪನ್ ವೆಬ್ ಸಿರೀಸ್ನಲ್ಲಿ ಆತನ ಬದುಕಿನ ಸಂಪೂರ್ಣ ಕಥೆ ಹೇಳಲಿದ್ದೇನೆ. ಸುಮಾರು 10 ಗಂಟೆಗಳ ಈ ವೆಬ್ ಸಿರೀಸ್‌ನ 14 ಎಪಿಸೋಡ್ಗಳಲ್ಲಿ ತೋರಿಸಲು ಪ್ಲ್ಯಾನ್ ಮಾಡಿದ್ದೇನೆ ಎಂದರು.
ವೆಬ್ ಸಿರೀಸ್ನಲ್ಲಿ ವೀರಪ್ಪನ್ ಕಥೆಯ ಎಲ್ಲಾ ಪಾತ್ರಗಳ ನಿಜವಾದ ಹೆಸರನ್ನೇ ಬಳಸಲಾಗ್ತಿದೆ. ವೀರಪ್ಪನ್ ಪಾತ್ರದಲ್ಲಿ ನಟ ಕಿಶೋರ್ ಅಭಿನಯಿಸಲಿದ್ದಾರೆ. ಅಲ್ಲದೆ ಶಂಕರ್ ಬಿದರಿ ಪಾತ್ರಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಬಹುತೇಕ ಫೈನಲ್ ಆಗಿದ್ದಾರೆ. ಇದಕ್ಕೆ ಸುನೀಲ್ ಶೆಟ್ಟಿ ಸಹ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದರು.
ಕೆಂಪಯ್ಯ, ಜ್ಯೋತಿ ಪ್ರಕಾಶ್ ಮಿರ್ಜಿ ಪಾತ್ರಕ್ಕೆ ಬಾಲಿವುಡ್ ಖ್ಯಾತ ನಟರನ್ನು ಸಂಪರ್ಕಿಸಿದ್ದು, ಅವರನ್ನು ಕರೆತರುವ ಜವಾಬ್ದಾರಿಯನ್ನು ಸುನೀಲ್ ಶೆಟ್ಟಿ ವಹಿಸಿಕೊಂಡಿದ್ದಾರೆ. ಅಲ್ಲದೆ ತೆಲುಗು, ತಮಿಳಿನ ಸ್ಟಾರ್ ನಟರು ಕೂಡ ವೀರಪ್ಪನ್ ವೆಬ್ ಸಿರೀಸ್ನಲ್ಲಿ ನಟಿಸಲಿದ್ದು, ಡಿಸೆಂಬರ್ ವೇಳೆಗೆ ರಿಲೀಸ್ ಮಾಡುವ ಪ್ಲ್ಯಾನ್ ಇದೆ. ಅಲ್ಲದೆ ಇನ್ನೆರಡು ದಿನಗಳಲ್ಲಿ ಚಿತ್ರದ ಪಾತ್ರವರ್ಗ ಹಾಗೂ ತಂತ್ರಜ್ಞರ ಟೀಂ ಫೈನಲ್ ಮಾಡಿ, ಅದೇ ದಿನ ವೀರಪ್ಪನ್ ವೆಬ್ ಸಿರೀಸ್‌ನ ಟೀಸರ್ ಬಿಡುಗಡೆ ಮಾಡುವುದಾಗಿ ಹೇಳಿದರು.