'ಕಾಲಚಕ್ರ' ಸಿನಿಮಾ ಬಿಡುಗಡೆಯಾಗುವ ಮುನ್ನವೇ ವಸಿಷ್ಠ ಸಿಂಹ ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದು ಈ ಸಿನಿಮಾಗೆ ನಿನ್ನೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಮುಹೂರ್ತ ನೆರವೇರಿದೆ. ಹೆಸರಿಡದ ಈ ಚಿತ್ರದಲ್ಲಿ ವಸಿಷ್ಠ ಸಿಂಹ ಹಾಗೂ ಕಿಶೋರ್ ಜೊತೆಯಾಗಿ ನಟಿಸುತ್ತಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮಿ ಜನಾರ್ಧನ್ ಎಂಬುವವರು ಜನರತ್ನ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಲೂಸಿಯಾ ಪವನ್‌ಕುಮಾರ್ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ವಚನ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಹೊಸ ಚಿತ್ರಕ್ಕೆ ನಿರ್ಮಾಪಕ ಜರ್ನಾಧನ್ ಸಹೋದರಿ ಲತಾ ಶಿವಣ್ಣ ಆಗಮಿಸಿ ಕ್ಲಾಪ್ ಮಾಡಿದರೆ, ನಿರ್ಮಾಪಕರ ಪುತ್ರಿ ಸ್ವೀಕೃತಿ ಕ್ಯಾಮರಾಗೆ ಚಾಲನೆ ನೀಡಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ಹೀರೋಗಳು. ವಸಿಷ್ಠ ಸಿಂಹ ಮತ್ತು ಕಿಶೋರ್. ಇಬ್ಬರೂ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ತನಿಖೆಯ ಹಾದಿಯಲ್ಲಿ ಸಾಗುವ ಈ ಸಿನಿಮಾದಲ್ಲಿ ಇಬ್ಬರ ನಡುವೆ ಶೀತಲ ಸಮರ ನಡೆಯುತ್ತದೆ. ನೈಜ ಘಟನೆಗಳನ್ನು ಮಿಶ್ರಣ ಮಾಡಿ ಸಾಗುವ ಈ ಚಿತ್ರದಲ್ಲಿ ಎರಡೂ ಪಾತ್ರಗಳಿಗೂ ಅಷ್ಟೇ ಪ್ರಾಮುಖ್ಯತೆ ಇದೆಯಂತೆ. ವಸಿಷ್ಠ ಸಿಂಹ ಮಾತನಾಡಿ, ಸ್ನೇಹಿತರೆಲ್ಲಾ ಸೇರಿ ಒಂದೊಳ್ಳೆ ಪ್ರಾಜೆಕ್ಟ್ ಮಾಡಬೇಕೆಂದು ಹೊರಟಿದ್ದಾರೆ.ಓಟಿಟಿ ಪ್ಲಾಟ್ ಫಾರ್ಮ್ ಬಹಳ ಸ್ಟ್ರಾಂಗ್ ಆಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಸಲ್ಲುವ ಹಾಗೆ ಸ್ಕ್ರಿಪ್ಟ್ ರೆಡಿ ಮಾಡಲಾಗುತ್ತಿದೆ. ನೈಜತೆಗೆ ಹೆಚ್ಚು ಗಮನ ಹರಿಸಿದ್ದೇವೆ ಎಂದಿದ್ದಾರೆ.
ವಸಿಷ್ಠ, ಕಿಶೋರ್ ಜೊತೆಗೆ ಸುಮನ್, ಧರ್ಮಣ್ಣ ಕಡೂರು, ಪ್ರಕಾಶ್ ತುಮ್ಮಿನಾಡು,ಸಿದ್ಲಿಂಗು ಶ್ರೀಧರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರ್ಯ ಮತ್ತು ಮುತ್ತುರಾಜ್ ನಟಿಸುತ್ತಿದ್ದಾರೆ.ಇದರ ಜೊತೆಗೆ ಹಾಸ್ಯ ನಟ ಚಿಕ್ಕಣ್ಣ, ಈ ಸಿನಿಮಾದಲ್ಲಿ ವಿಶೇಷ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ. ಬ್ಯಾಂಡ್ ಸೆಟ್ ಯುವಕನಾಗಿ ಧರ್ಮಣ್ಣ ನಟಿಸಲಿದ್ದು, ಈ ರೀತಿಯ ಪಾತ್ರ ಸಿಕ್ಕಿದ್ದು ಖುಷಿ ನೀಡಿದೆ ಎಂದರು. ನಾಯಕಿ ಆಯ್ಕೆ ಕೂಡಾ ನಡೆಯುತ್ತಿದ್ದು, ನಾಲ್ಕು ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ನೀಡಲಿದ್ದಾರೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ, ನವೀನ್ ಕುಮಾರ್ ಛಾಯಾಗ್ರಹಣ ಮತ್ತು ಹರೀಶ್ ಕೊಮ್ಮ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.ಸಂಕ್ರಾಂತಿ ವೇಳೆಗೆ ಚಿತ್ರೀಕರಣ ಆರಂಭವಾಗಲಿದೆ.