ಕನ್ನಡ ಚಿತ್ರ ರಂಗದ ಕನಸುಗಾರ ವಿ ರವಿಚಂದ್ರನ್ ಅವರು ಮನೆಯಲ್ಲಿ ಕುಳಿತು ಏನು ಮಾಡುತ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಸದ್ಯಕ್ಕೆ ‘ರವಿ ಬೋಪಣ್ಣ’ ಸಿನಿಮಾದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಇದರ ಜೊತಗೆ ಅವರು ಹೊಸ ಕಥೆ, ಚಿತ್ರಕಥೆ ಬರೆಯುವುದರ ಕಡೆ ಗಮನ ಹರಿಸುತ್ತಿದ್ದಾರೆ.
ಲಾಕ್‌ಡೌನ್ ಸಂದರ್ಭದಲ್ಲಿ ಕ್ರೇಜಿ ಸ್ಟಾರ್ ಹೆಚ್ಚು ಸಮಯವನ್ನು ತಮ್ಮ ಕುಟುಂಬದೊಂದಿಗೆ ಕಳೆಯುತ್ತಿದ್ದಾರೆ. ಬಹಳ ಬೇಗ ಈ ಲಾಕ್‌ಡೌನ್ ಕೊನೆಗೊಳ್ಳಬೇಕು ಎಂಬುದು ಅವರ ಆಶಯ. ಅಂದಹಾಗೆ ವಿ ರವಿಚಂದ್ರನ್ ಅವರ ತಂದೆ ಕನ್ನಡ ನಾಡಿನ ಹೆಮ್ಮಯ ನಿರ್ಮಾಪಕ, ವಿತರಕ ಎನ್ ವೀರಸ್ವಾಮಿ ಅವರು ಸ್ಥಾಪನೆ ಮಾಡಿದ ‘ಈಶ್ವರಿ ಸಂಸ್ಥೆ’ಗೆ 50 ವರ್ಷ ತುಂಬಿದೆ. ಈ ವಿಚಾರದಲ್ಲೂ ವಿ ರವಿಚಂದ್ರನ್ ಅವರಲ್ಲಿ ಕೆಲವು ಆಲೋಚನೆಗಳಿವೆ. ಅದು ಒಂದು ಹಂತಕ್ಕೆ ಬಂದ ಮೇಲೆ ‘ಈಶ್ವರಿ ಸಂಸ್ಥೆ’ ಗೋಲ್ಡನ್ ಜೂಬ್ಲಿ ಬಗ್ಗೆ ಹೇಳಲಿದ್ದಾರೆ.
ಈಶ್ವರಿ ಸಂಸ್ಥೆ ಇಂದ 25 ವರ್ಷಗಳು ತುಂಬಿದಾಗ ‘ಸಿಪಾಯಿ’ ಕನ್ನಡ ಸಿನಿಮಾ ತಯಾರಾಗಿ ದೊಡ್ಡ ಯಶಸ್ಸು ಸಹ ಕಂಡಿತ್ತು. ವಿ ರವಿಚಂದ್ರನ್ ಜೊತೆ ಮೊದಲ ಬಾರಿಗೆ ಕನ್ನಡದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ವಿಶೇಷ ಪಾತ್ರವೊಂದರಲ್ಲಿ ತೆರೆ ಹಂಚಿಕೊಂಡಿದ್ದರು. ಸ್ನೇಹಕ್ಕೆ ಸ್ನೇಹ.. ಪ್ರೀತಿಗೆ ಪ್ರೀತಿ.. ಹಾಡು ವಿ ರವಿಚಂದ್ರನ್ ಹಾಗೂ ಚಿರಂಜೀವಿ ಅಭಿನಯದಲ್ಲಿ ಬಹಳ ಪ್ರಸಿದ್ಧಿ ಪಡೆಯಿತು. ದಕ್ಷಿಣ ಭಾರತದ ಜನಪ್ರಿಯ ತಾರೆ ಕನ್ನಡದ ಸೌಂದರ್ಯ ‘ಸಿಪಾಯಿ’ ಚಿತ್ರದ ನಾಯಕಿ ಆಗಿ ಅಭಿನಯ ಮಾಡಿದ್ದರು.