ಕೊರೊನಾದಿಂದಾಗಿ ಇಡೀ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸಿನಿಮಾವನ್ನೇ ನಂಬಿಕೊಂಡಿದ್ದ, ಸಾವಿರಾರು ಸಿನಿಮಾ ಕಾರ್ಮಿಕರು, ತಂತ್ರಜ್ಞಾನರು, ಹಿರಿಯ ಪೋಷಕ ಕಲಾವಿದರು ಕಷ್ಟ ಅನುಭವಿಸುತ್ತಿದ್ದಾರೆ. ಈ ಸಮಯದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮೂರು ಸಾವಿರ ಸಿನಿಮಾ ಕಾರ್ಮಿಕರಿಗೆ ಆಹಾರದ ಕಿಟ್ಗಳನ್ನ ಕೊಡುವ ಮೂಲಕ ತಮ್ಮ ಕೈಲಾದ ಸಹಾಯವನ್ನ ಮಾಡಿದ್ದಾರೆ.
ಉಪೇಂದ್ರ ಈ ಕೆಲಸ ನೋಡಿದ ಸಾಕಷ್ಟು ಸಿನಿಮಾ ತಾರೆಯರು ಕೂಡ, ಉಪ್ಪಿ ಜೊತೆ ಕೈ ಜೋಡಿಸಿ ಕಷ್ಟದಲ್ಲಿರುವ ಕಾರ್ಮಿಕರಿಗೆ, ಪೋಷಕ ಕಲಾವಿದರಿಗೆ, ಸಹ ಕಲಾವಿದರಿಗೆ ಆಹಾರದ ಕಿಟ್ ಗಳನ್ನ ಕೊಡುವ ಕೆಲಸ ಮಾಡುತ್ತಿದ್ದಾರೆ. ಉಪ್ಪಿಯ ಈ ಸೇವೆ ನೋಡಿ ನೂರಾರು ದಾನಿಗಳು ಕೂಡ ಉಪೇಂದ್ರ ಕೆಲಸಕ್ಕೆ ಸಾಥ್ ನೀಡಿದ್ದಾರೆ. ಇದರ ಜೊತೆಗೆ ರೈತರು ಬೆಳದ ತರಕಾರಿಗಳನ್ನ, ಸರಿಯಾದ ಬೆಲೆಗೆ ಖರೀದಿಸಿ ಈ ತರಕಾರಿಗಳನ್ನ ಕಷ್ಟದಲ್ಲಿ ಇರುವವರಿಗೆ ಉಪೇಂದ್ರ ಹಂಚುವ ಕೆಲಸ ಮಾಡುವ ಮೂಲಕ ಸಮಾಜ ಸೇವೆ ಮಾಡ್ತಾ ಇದ್ದಾರೆ.
ಇದನ್ನ ಸಹಿಸದ ಕೆಲ ವ್ಯಕ್ತಿಗಳು ಸೋಷಿಯಲ್ ಮೀಡಿಯಾದಲ್ಲಿ, ಉಪೇಂದ್ರಗೆ ಕೆಲ ಪ್ರಶ್ನೆಗಳನ್ನ ಕೇಳಿದ್ದಾರೆ. ರೈತರ ಜಾಗದಲ್ಲಿ ನೀವು ರೆಸಾರ್ಟ್ ಮಾಡಿರೋದು ತಪ್ಪು ಅಲ್ವಾ ಅಂತಾ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉಪೇಂದ್ರ ಬಹಳ ತಾಳ್ಮೆಯಿಂದ, ಮೊದಲು ಆ ಜಾಗದಲ್ಲಿ ವಿಲೇಜ್ ಅಂತಾ ರೆಸಾರ್ಟ್ ಇತ್ತು. ಆ ಜಾಗವನ್ನ ಸರ್ಕಾರ ಹಾರಾಜಿನಲ್ಲಿ ಮಾರಾಟ ಮಾಡಿತ್ತು. ಆಗ ನಾನು ಆ ಜಾಗವನ್ನ ತಗೊಂಡು ರೆಸಾರ್ಟ್ ಮಾಡಿದ್ದು, ಇನ್ನು ರೆಸಾರ್ಟ್ ಹಿಂಭಾಗದಲ್ಲಿ ಶಿವಣ್ಣ ಎಂಬ ರೈತರಿಂದ ಖರೀದಿಸಿ ನಾವು ಕೂಡ ಅಲ್ಲಿ ತರಕಾರಿಗಳನ್ನ ಬೆಳೆಯುತ್ತಿದ್ದೇವೆ ಅಂತಾ ಉತ್ತರಿಸಿದರು.
ಇನ್ನು ನೀವು ಯಾಕೇ ಹೋರಾಟಗಳಲ್ಲಿ ಭಾಗವಹಿಸುವುದಿಲ್ಲ, ಯಾಕೇ ಆಡಳಿತ ಪಕ್ಷವನ್ನ ಖಂಡಿಸೋಲ್ಲ ಎಂಬ ಪ್ರಶ್ನೆಗೆ, ನಾವು ಮೊದಲಿನಿಂದಲೂ ಯಾವ ಸರ್ಕಾರವನ್ನ ಖಂಡಿಸೋಲ್ಲ. ಯಾಕೆಂದರೆ ಅದರಲ್ಲಿ ನಂಬಿಕೆ ಇಲ್ಲ ಎಂದಿದ್ದಾರೆ.