ಚಿತ್ರ ಸೆಟ್ಟೇರಿದಾಗಿನಿಂದ ಕೇವಲ ಎರಡು ಬಾರಿ ಮಾಧ್ಯಮದ ಮುಂದೆ ಬಂದ ‘ಮಜ್ಜಿಗೆ ಹುಳಿ’ ಸಣ್ಣ ಬಜೆಟ್ನ ಸಿನಿಮಾ ಹಾಗೂ ಒಮ್ಮೆಯೂ ಮಾಧ್ಯಮದ ಮುಂದೆ ಬಾರದ ‘ವಿಜಯದ್ವಜ’ ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿವೆ. ಅಂಬರೀಶ್ ಅವರ ’ಅಂತ’ ಮರು ಬಿಡುಗಡೆ ಇದೆ ವಾರ ಅಂತಾ ಹೇಳಲಾಗಿತ್ತು. ಆದರೆ, ಯಾವುದೇ ಜಾಹೀರಾತು ಕಾಣಿಸಿಕೊಂಡಿಲ್ಲ.
‘ಮಜ್ಜಿಗೆ ಹುಳಿ’ :
ಈ ಚಿತ್ರದ ಶೀರ್ಷಿಕೆಗೂ ಮತ್ತು ನಿರ್ದೇಶಕ ರವೀಂದ್ರ ಹೇಳುವ ‘ಮೊದಲ ರಾತ್ರಿಯ ರಸಾನುಭವಕ್ಕೆ ಭಂಗ’ ಕಥಾ ವಸ್ತುವಿಗೂ ಹೋಲಿಕೆ ಇಲ್ಲ. ಇಡೀ ಸಿನಿಮಾ ಒಂದೇ ಕೋಣೆಯಲ್ಲಿ ನಡೆಯುವುದು ಅಂತಾ ಬೇರೆ ಹೇಳುತ್ತಾರೆ.
ಈ ಚಿತ್ರಕ್ಕೆ ರವೀಂದ್ರ ಕೊಟಕಿ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆ ಗೀತ ರಚನೆ ಹಾಗೂ ನಿರ್ದೇಶನ ಸಹ ಮಾಡಿದ್ದಾರೆ. ಎಂ ಸಜೀವ್ ರಾವ್ ಸಂಗೀತವಿದೆ. ನರಸಿಂಹ ಮೂರ್ತಿ ಹಾಗೂ ಶ್ಯಾಮಸುಂದರ್ ಛಾಯಾಗ್ರಹಣ ಇದೆ. ಸಂಜೀವ್ ರೆಡ್ಡಿ ಸಂಕಲನ, ಹೈಟ್ ಮಂಜು ಮತ್ತು ಗಂಗಮ್ ರಾಜು ನೃತ್ಯ ಎರಡು ಹಾಡುಗಳಿಗೆ ಮಾಡಿದ್ದಾರೆ. ಎಸ್ ಎಲ್ ವಿ ಆರ್ಟ್ಸ್ ಲಾಂಛನದಲ್ಲಿ ಎಸ್ ರಾಮಚಂದ್ರ ಜೊತೆ ರಘುರಾಜ್ ಮತ್ತು ಗಂಗಾಧರ್ ‘ಮಜ್ಜಿಗೆ ಹುಳಿ’ ಚಿತ್ರಕ್ಕೆ ಸಾಥ್ ನೀಡಿದ್ದಾರೆ.
ರೂಪಿಕಾ ಹಾಗೂ ದೀಕ್ಷಿತ್ ವೆಂಕಟೇಶ್ ನವ ದಂಪತಿಯಾಗಿ, ಜೊತೆಗೆ ಸುಚೀಂದ್ರ ಪ್ರಸಾದ್, ಮೋಹನ್ ಜುನೇಜಾ, ರಮೇಶ್ ಭಟ್, ಮಿಮಿಕ್ರಿ ದಯಾನಂದ, ತರಂಗ ವಿಶ್ವ, ಕೆಂಪೇಗೌಡ, ಕುರಿ ಸುನಿಲ್, ಮಲ್ಲೇಶ್, ಶಂಕರ್ ನಾರಾಯಣ್ ಹಾಗೂ ಇತರರು ತಾರಾ ಬಳಗದಲ್ಲಿದ್ದಾರೆ.
ವಿಜಯ ಧ್ವಜ :
ಸ್ಯಾಂಡಲ್ವುಡ್ನಲ್ಲಿ ಮಕ್ಕಳ ಹಾಗೂ ದೇಶಭಕ್ತಿ ಸಿನಿಮಾಗಳು ಸಾಕಷ್ಟು ಬಂದಿವೆ. ಇದೀಗ ಭಾರತದ ಪರಂಪರೆಯನ್ನು ಸಾರುವ ನಿಟ್ಟಿನಲ್ಲಿ ಶ್ರೀನಾಥ್ ವಸಿಷ್ಠ ನಿರ್ದೇಶಿಸಿರುವ 'ವಿಜಯಧ್ವಜ' ಸಿನಿಮಾ ಇಂದು ತೆರೆಗೆ ಬರುತ್ತಿದೆ.
ನಾಲ್ವರು ವಿದ್ಯಾರ್ಥಿಗಳನ್ನು ಶಿಕ್ಷಕರೊಬ್ಬರು ಹಂಪಿ ಪ್ರವಾಸಕ್ಕೆಂದು ಕರೆದೊಯ್ತಾರೆ. ಹಂಪಿ ಕುರಿತಾದ ಕೌತುಕ ಸಂಗತಿಗಳನ್ನು ತಿಳಿದ ಮಕ್ಕಳು ಆ ಸ್ಥಳದ ಬಗ್ಗೆ ಮತ್ತಷ್ಟು ಕುತೂಹಲಭರಿತರಾಗುತ್ತಾರೆ. ಹಂಪಿ ಪ್ರವಾಸದ ವೇಳೆಯೇ ಅವರಿಗೆ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಸೈನಿಕನ ಪರಿಚಯವಾಗುತ್ತದೆ. ಆತ ಮಕ್ಕಳಿಗೆ ವಿಜಯನಗರ ಸಾಮ್ರಾಜ್ಯದ ಕುರಿತಾಗಿ ತನಗೆ ತಿಳಿದ ವಿಚಾರಗಳನ್ನು ತಿಳಿಸುತ್ತಾರೆ. ಮಕ್ಕಳು ಶಿಕ್ಷಕರು ಹೇಳಿದ ವಿಚಾರಗಳು, ಸೈನಿಕ ಹೇಳಿದ ಸಂಗತಿಗಳು, ಹಂಪಿಯಲ್ಲಿರುವ ವಾಸ್ತವದ ಪರಿಸ್ಥಿತಿಯನ್ನು ತಾಳೆ ಹಾಕಿ ನೋಡುತ್ತಾರೆ. ಅಲ್ಲದೇ ಭವಿಷ್ಯದಲ್ಲಿ ತಮ್ಮ ಹಾಗೂ ರಾಷ್ಟ್ರದ ಅಭ್ಯುದಯಕ್ಕಾಗಿ, ಪರಕೀಯರ ಆಕ್ರಮಣದಿಂದ ರಾಷ್ಟ್ರ ರಕ್ಷಣೆಗಾಗಿ ಪಣ ತೊಡಬೇಕೆಂದು ನಿರ್ಧರಿಸಿ ಪ್ರಮಾಣ ಮಾಡುತ್ತಾರೆ. ಇದು 'ವಿಜಯಧ್ವಜ' ಚಿತ್ರದ ಕಥಾ ಸಾರಾಂಶ. ಇಂಥ ದೇಶಭಕ್ತಿ ನಾಡನ್ನು ಉಳಿಸಿಕೊಳ್ಳುವ ಬಗೆಗಿನ ಸಿನಿಮಾ ಇಂದು ರಿಲೀಸ್ ಆಗುತ್ತಿದೆ.
ವಿಜಯಧ್ವಜ' ಚಿತ್ರದ ಮೂಲಕ ನಮ್ಮ ಭವ್ಯ ಭಾರತದ ಇತಿಹಾಸವನ್ನು ಸಂದೇಶಾತ್ಮಕವಾಗಿ ತಿಳಿಸುವ ಪ್ರಯತ್ನವನ್ನು ನಿರ್ದೇಶಕರಾದ ಶ್ರೀನಾಥ್ ವಸಿಷ್ಠ ಮಾಡಿದ್ದಾರೆ. ಈ ಚಿತ್ರದಲ್ಲಿ ಶಾಲಾ ವಿದ್ಯಾರ್ಥಿಗಳಾಗಿ ತನ್ಮಯಿ ಎಸ್. ವಸಿಷ್ಠ, ಮಾಸ್ಟರ್ ಲೋಕೇಶ್, ಮಾಸ್ಟರ್ ಭುವನ್, ಮಾಸ್ಟರ್ ರಕ್ಷನ್ ಅಭಿನಯಿಸಿದ್ದು ಉಪಾಧ್ಯಾಯರಾಗಿ ನಾಗೇಶ್ ಯಾದವ್, ಕಾರ್ಗಿಲ್ ಸೈನಿಕನಾಗಿ ಕ್ಯಾಪ್ಟನ್ ನವೀನ್ ನಾಗಪ್ಪ ಅಭಿನಯಿಸಿದ್ದಾರೆ. ಜೆ ಎಂ ಪ್ರಹ್ಲಾದ್ ಕಥೆ, ಚಿತ್ರಕಥೆ, ಪವನ್ ಕುಮಾರ್ ಛಾಯಾಗ್ರಹಣ, ಪ್ರವೀಣ್ ಡಿ ರಾವ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ. ' ವಿಜಯಧ್ವಜ' ವನ್ನು ದರ್ಶನ್ ಎಂಬುವರು ನಿರ್ಮಿಸಿದ್ದಾರೆ.