ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ 'ತ್ರಿವಿಕ್ರಮ' ಚಿತ್ರ ಬಿಡುಗಡೆಗೂ ಮುನ್ನವೇ ಭಾರೀ ಹವಾ ಎಬ್ಬಿಸಿದೆ. ಚಿತ್ರದ ಹಾಡುಗಳು ಎ2 ಮ್ಯೂಸಿಕ್ ಸಂಸ್ಥೆಗೆ 50 ಲಕ್ಷ ರೂಪಾಯಿ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ.
ಸ್ಟಾರ್ ಹೀರೋ ನಟಿಸಿರುವ ಸಿನಿಮಾ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗುವುದು ಅಪರೂಪ. ಅಂತದ್ದರಲ್ಲಿ ರವಿಚಂದ್ರನ್ ಪುತ್ರನ ಸಿನಿಮಾ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಮಾರಾಟವಾಗಿರುವುದು ನಿಜಕ್ಕೂ ಸಂತೋಷದ ವಿಚಾರ. ಚಿತ್ರದಲ್ಲಿ ಒಟ್ಟು 6 ಹಾಡುಗಳಿದ್ದು ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಹಾಗೂ ಯೋಗರಾಜ್ ಭಟ್ ಈ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಅರ್ಜುನ್ ಜನ್ಯ ಈ ಹಾಡುಗಳಿಗೆ ಭರ್ಜರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಜಯ್ ಪ್ರಕಾಶ್ ಹಾಗೂ ಸಂಚಿತ್ ಹೆಗಡೆ ಹಾಡುಗಳಿಗೆ ಧ್ವನಿಯಾಗಿದ್ದಾರೆ. ತ್ರಿವಿಕ್ರಮ ಚಿತ್ರದ ಹಾಡುಗಳು ಭಾರೀ ಸದ್ದು ಮಾಡುತ್ತಿದ್ದು ಸಿನಿಮಾಗೆ ಕೂಡಾ ಒಳ್ಳೆ ಪ್ರತಿಕ್ರಿಯೆ ದೊರೆಯುವ ಭರವಸೆ ಇದೆ ಎನ್ನಲಾಗಿದೆ.
ವಿಕ್ರಮ್ ರವಿಚಂದ್ರನ್, ಅಪ್ಪನ ಸ್ಟಾರ್ ವ್ಯಾಲ್ಯೂ ಬಳಸಿಕೊಳ್ಳದೆ ತನ್ನ ಪ್ರತಿಭೆಯಿಂದ ಹೆಸರು ಮಾಡಬೇಕು ಎಂದು ಕನಸು ಕಾಣುತ್ತಿರುವ ಹುಡುಗ. ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡಿ ಸಿನಿಮಾ ಬಗ್ಗೆ ಒಳ್ಳೆ ಅನುಭವ ಹೊಂದಿರುವ ಹುಡುಗ. ವಿಕ್ರಮ್ ಮ್ಯಾನರಿಸಂಗೆ ತಕ್ಕಂತೆ ನಿರ್ದೇಶಕ ಸಹನಾ ಮೂರ್ತಿ ಕಥೆ ರೆಡಿ ಮಾಡಿದ್ದಾರೆ. ಚಿತ್ರದ ಮೇಲೆ ಸ್ಯಾಂಡಲ್ವುಡ್ಗೆ ಬಹಳ ನಿರೀಕ್ಷೆ ಇದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಕೂಡಾ ಸಿನಿಮಾ ಮೇಲೆ ಭರವಸೆ ಹೆಚ್ಚಾಗುವಂತೆ ಮಾಡಿದೆ.
ಚಿತ್ರವನ್ನು ಸೋಮಣ್ಣ ನಿರ್ಮಿಸಿದ್ದಾರೆ. ಜ್ಯೂನಿಯರ್ ರವಿಚಂದ್ರನ್ ಅವರನ್ನು ಚಿತ್ರದಲ್ಲಿ ಚೆನ್ನಾಗಿ ತೋರಿಸಬೇಕು. ಎಷ್ಟು ಖರ್ಚಾದರೂ ಸರಿಯೇ ಎಂಬ ಉದ್ದೇಶದಿಂದ ಚಿತ್ರಕ್ಕೆ ಕೋಟಿ ಕೋಟಿ ಬಂಡವಾಳ ಹೂಡಿದ್ದಾರೆ. ಇದಕ್ಕೆ ಉದಾಹರಣೆ ಈ ಚಿತ್ರದ ಎರಡು ಹಾಡುಗಳನ್ನು ಚೀನಾ, ಭಾರತ, ಪಾಕಿಸ್ತಾನ ಗಡಿಗಳಲ್ಲಿ ಚಿತ್ರೀಕರಿಸಿರುವುದು. ಒಟ್ಟಿನಲ್ಲಿ ವಿಕ್ರಮ್ ರವಿಚಂದ್ರನ್ ತಮ್ಮ ಮೊದಲ ಸಿನಿಮಾದಲ್ಲೇ ದಾಖಲೆ ಬರೆದಿದ್ದಾರೆ ಎನ್ನಬಹುದು.