ಬೆಂಗಳೂರು : ದಸರಾ ಎಂದರೆ ಮನೆ ಮನೆಯಲ್ಲೂ ಹಬ್ಬ. ಗೊಂಬೆಗಳನ್ನು ಕೂರಿಸಿ ಅವುಗಳನ್ನು ಅಲಂಕರಿಸುವುದು, ಮನೆಗೆ ಬರುವ ಮಕ್ಕಳಿಗೆ ತಿಂಡಿ ತಿನಿಸು ಹಂಚುವುದೇ ಈ ಹಬ್ಬದ ವಿಶೇಷ. ಈ ಹಬ್ಬಕ್ಕೆ ಬೆಂಗಳೂರಿನ ತ್ಯಾಗರಾಜನಗರದ ನಿವಾಸಿ ವಿಜಯಲಕ್ಷ್ಮಿ ಅಯ್ಯರ್, 3,000 ಗೊಂಬೆಗಳನ್ನು ಜೋಡಿಸಿದ್ದಾರೆ.
ಪ್ರತಿವರ್ಷ ವಿಶೇಷವಾಗಿ ಬೊಂಬೆಗಳನ್ನು ಅಲಂಕರಿಸುವ ಇವರು, ಈ ಬಾರಿ ಆರು ಅಡಿ ಎತ್ತರದ ವೆಂಕಟೇಶ್ವರನನ್ನು ಅಲಂಕರಿಸಿದ್ದಾರೆ. ವಿಜಯಲಕ್ಷ್ಮಿ ಅವರು 32 ಜೋಡಿ ಪಟ್ಟದ ಗೊಂಬೆಗಳನ್ನು ಜೋಡಿಸಿದ್ದಾರೆ ಈ ಪಟ್ಟದ ಬೊಂಬೆಗಳನ್ನು ವಂಶಪಾರಂಪರ್ಯವಾಗಿ 10 ತಲೆಮಾರುಗಳಿಂದ ಕಾಪಾಡಿಕೊಂಡು ಬಂದಿದ್ದಾರೆ.
ಇವರ ಮನೆಯಲ್ಲಿ ಮುತ್ತಿನ ಗೊಂಬೆಗಳು, ಮರದ ಗೊಂಬೆಗಳು, ಹಿತ್ತಾಳೆ ಗೊಂಬೆಗಳು , ಕಲ್ಲಿನ ಗೊಂಬೆಗಳು ಸೇರಿದಂತೆ ಹಲವು ಬಗೆಯ ಬೊಂಬೆಗಳಿವೆ. ಈ ಬಾರಿ ವಿಶೇಷವಾಗಿ ಆರೂವರೆ ಅಡಿ ಎತ್ತರದ ತಿರುಪತಿ ವೆಂಕಟೇಶ್ವರ ಸ್ವಾಮಿಯನ್ನು ನಿರ್ಮಿಸಿ ಅಲಂಕರಿಸಿದ್ದಾರೆ. 3 ಅಡಿಗಳ ಎತ್ತರದ ಮಹಾಲಕ್ಷ್ಮಿ ಅಮ್ಮನವರ ವಿಗ್ರಹ ನಿರ್ಮಿಸಿ ಸುಂದರವಾಗಿ ಅಲಂಕರಿಸಲಾಗಿದೆ. ವಿಜಯನಗರದ ಕೃಷ್ಣದೇವರಾಯ ಮತ್ತು ಅವರ ಕುಟುಂಬ ವರ್ಗದ ಬೊಂಬೆಗಳನ್ನು ಇಡಲಾಗಿದೆ.
ವಜ್ರಾಂಗಿ ಅಲಂಕೃತ ಲಕ್ಷ್ಮೀನಾರಾಯಣ ವಿರೂಪಾಕ್ಷ ಸ್ವಾಮಿ ಮತ್ತು ಅಮ್ಮನವರು, ನ್ಯಾನೋ ಪಟ್ಟದ ಗೊಂಬೆಗಳು, ಅಮೇರಿಕಾ ಅಧ್ಯಕ್ಷ ಟ್ರಂಪ್, ನಾವಿಬ್ಬರು ನಮಗಿಬ್ಬರು ಎಂಬ ನಾಲ್ಕು ಮಕ್ಕಳ ಪರಿವಾರ ಸೇರಿದಂತೆ ರಾಜ ರಾಣಿ ಜೋಡಿಗಳು ಹಾಗೂ 356 ವರ್ಷದ ಹಳೆಯ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಜೋಡಿ ಇಲ್ಲಿದೆ.