ಖ್ಯಾತ ಗಾಯಕರಾದ ಕೆ.ಜೆ.ಏಸುದಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರ ಮೂವರೂ ಒಂದೇ ವೇದಿಕೆ ಮೇಲೆ ಹಾಡಲು ವೇದಿಕೆ ಸಿದ್ಧವಾಗುತ್ತಿದೆ. ತಾವೇ ಹಾಡಿರುವ ಸುಮಧುರ ಚಿತ್ರಗೀತೆಗಳನ್ನು ಮತ್ತೆ ಅಭಿಮಾನಿಗಳ ಮುಂದೆ ಈ ತ್ರಿಮೂರ್ತಿಗಳು ಹಾಡಲಿದ್ದಾರೆ.
ಬುಕ್ ಮೈ ಶೋ ಹಾಗೂ ಎಲೆವೆನ್ ಪಾಯಿಂಟ್ ಟೂ ಜೊತೆಯಾಗಿ ಸೇರಿ 'ಲೆಜೆಂಡ್ಸ್' ಹೆಸರಿನ ಕಾರ್ಯಕ್ರಮವನ್ನು ನವೆಂಬರ್ 30ರಂದು ಹೈದರಾಬಾದ್ನಲ್ಲಿ ಆಯೋಜಿಸಿದ್ದಾರೆ. ನಿನ್ನೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಎಸ್ಪಿಬಿ ಮಾತನಾಡಿ, ತೆಲುಗಿನಲ್ಲಿ ಈ ರೀತಿಯ ಕಾರ್ಯಕ್ರಮ ಮಾಡುತ್ತಿರುವುದು ಮೊದಲ ಬಾರಿ. ಈ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಜರುಗುತ್ತಿದೆ. ನಾನು, ಅಣ್ಣನ ಸಮಾನರಾದಂತಹ ಏಸುದಾಸ್ ಹಾಗೂ ಚಿತ್ರ ಮೂವರೂ ಇದುವರೆಗೂ ಲಕ್ಷಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಹಾಡಿದ್ದೇವೆ. ಆ ಹಾಡುಗಳಲ್ಲಿ 30 ಹಾಡುಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಕಾರ್ಯಕ್ರಮದಲ್ಲಿ ಹಾಡಲಿದ್ದೇವೆ. ಆದರೆ ಯಾವ ಹಾಡುಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಕಸರತ್ತು ನಡೆಸುತ್ತಿದ್ದೇವೆ. ಅದು ಬಹಳ ಕಷ್ಟಕರ ವಿಷಯ.
ಸಿಂಗಪೂರ್ನಲ್ಲಿ 'ಲೆಜೆಂಡ್ಸ್' ಹೆಸರಿನಲ್ಲಿ ಇದೇ ರೀತಿಯ ಕಾರ್ಯಕ್ರಮ ಮಾಡಿದ್ದೆವು. ಈ ಕಾರ್ಯಕ್ರಮಕ್ಕೆ ಒಳ್ಳೆಯ ಪ್ರಶಂಸೆ ದೊರೆತಿತ್ತು. ಪ್ರಪಂಚದಾದ್ಯಂತ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ಲ್ಯಾನ್ ಮಾಡಿದ್ದೇವೆ. ಹೈದರಾಬಾದ್ 'ಲೆಜೆಂಡ್ಸ್' ಕಾರ್ಯಕ್ರಮದಲ್ಲಿ ರೆಹಮಾನ್ ಆರ್ಕೆಸ್ಟ್ರಾ ಸ್ಕೂಲ್ ವಿದ್ಯಾರ್ಥಿಗಳು ಕೂಡಾ ಹಾಡಲಿದ್ದಾರೆ. ನಾವು ಮೂವರೂ ಗಾಯಕರ ನಡುವೆ ಒಳ್ಳೆಯ ಅನುಬಂಧವಿದೆ. ಇಲ್ಲದಿದ್ದರೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವೇ ಇಲ್ಲ ಎಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಹೇಳಿದ್ದಾರೆ.