ನವರಸ ನಾಯಕ ಜಗ್ಗೇಶ್ ಅಭಿನಯದ 'ತೋತಾಪುರಿ' ಭಾಗ- 1 ಹಾಗೂ ಭಾಗ- 2 ಸಿನಿಮಾ ವಿಶೇಷ ರೀತಿಯಲ್ಲಿ ತಯಾರಾಗುತ್ತಿದ್ದು, ಮೊದಲ ಭಾಗ ಇನ್ನೇನು ಬಿಡುಗಡೆಗೆ ಸಿದ್ಧವಾಗುತ್ತಿದೆ. ಮೊದಲ ಭಾಗ ಬಿಡುಗಡೆ ಆದ ಆರು ವಾರಗಳಲ್ಲಿ 2ನೇ ಭಾಗ ಸಹ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ವಿಜಯಪ್ರಸಾದ್ ಮತ್ತು ನಿರ್ಮಾಪಕ ಕೆ. ಎ. ಸುರೇಶ್ ಚಿಂತನೆ ನಡೆಸಿದ್ದಾರೆ.
ಸದ್ಯ ‘ತೋರಪುರಿ 1’ ಚಿತ್ರದ ರಿರೆಕಾರ್ಡಿಂಗ್ ಮುಗಿಯುವ ಹಂತಕ್ಕೆ ಬಂದಿದೆ. ತೋತಾಪುರಿ- 2 ಭಾಗದ ಶೇ 70ರಷ್ಟು ಚಿತ್ರೀಕರಣ ಮುಗಿದಿದೆ. ಪ್ರಸ್ತುತ ಸಮಾಜದಲ್ಲಿ ಕಾಡುತ್ತಿರುವ ಜಾತಿ, ಧರ್ಮ, ಕೋಮುವಾದ ಅಲ್ಲದೆ ನಿರ್ದೇಶಕ ವಿಜಯಪ್ರಸಾದ್ ಅವರ ಬಾಲ್ಯದ ಅನುಭವವನ್ನು ಈ ಸಿನಿಮಾದಲ್ಲಿ ಅಳವಡಿಸಿದ್ದಾರೆ. ಮೈಸೂರು, ಶ್ರೀ ರಂಗಪಟ್ಟಣ, ಬನ್ನೂರು, ಮಡಿಕೇರಿಯ ಭಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.
ನವರಸ ನಾಯಕ ಜಗ್ಗೇಶ್ ಮೊದಲ ಬಾರಿಗೆ ರೈತನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮುಸ್ಲಿಂ ಹುಡುಗಿ ಆಗಿ ನಾಯಕಿ ಅದಿತಿ ಪ್ರಭುದೇವ ಸಾಥ್ ನೀಡಿದ್ದಾರೆ. ಪವಿತ್ರ ಲೋಕೇಶ್, ದತ್ತಣ್ಣ, ಸುಮನ್ ರಂಗನಾಥ್, ವೀಣಾ ಸುಂದರ್, ವೆಂಕಟ ರಾವ್, ಪ್ರಭು ದೇವ, ಹೇಮಾ ದತ್ತ್ ಸೇರಿದಂತೆ ಸಿನಿಮಾದಲ್ಲಿ 80 ಮಂದಿ ಪೋಷಕ ಕಲಾವಿದರ ತಂಡ ಇದೆ.
'ತೋತಾಪುರಿ'- 2ನಲ್ಲಿ ಡಾಲಿ ಧನಂಜಯ್ ಎಂಟ್ರಿ ಸಹ ಇದೆ. ಅನೂಪ್ ಸೀಳಿನ್ ರಾಗ ಸಂಯೋಜನೆ, ನಿರಂಜನ್ ಬಾಬು ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ ಒದಗಿಸಿದ್ದಾರೆ.