ಇತ್ತೀಚೆಗೆ ಸಿನಿಮಾಗಳಿಗೆ ಟೈಟಲ್ ಇಡುವುದೇ ಒಂದು ಫ್ಯಾಷನ್ ಆಗಿದ್ದು, ಅನೇಕ ಚಿತ್ರ ವಿಚಿತ್ರ ಶೀರ್ಷಿಕೆಗಳು ಅನಾವರಣಗೊಳ್ಳುತ್ತಿವೆ. ಇದೀಗ ವಿಭಿನ್ನ ಶೀರ್ಷಿಕೆ ಹೊತ್ತ ಚಿತ್ರವೊಂದು ಸೆಟ್ಟೇರಿ ಬಹುತೇಕ ಚಿತ್ರೀಕರಣ ಮುಗಿಸಿದೆ. ಈ ಚಿತ್ರದ ಟೈಟಲ್ 'ಕಂಡ್ಹಿಡಿ ನೋಡೋಣ'.
ಹೌದು, ಈ ಚಿತ್ರದ ಹೆಸರೇ 'ಕಂಡ್ಹಿಡಿ ನೋಡೋಣ', ಈ ಶೀರ್ಷಿಕೆಯೇ ಬಹು ಹಾಸ್ಯಮಯವಾಗಿದೆ. ಚಿತ್ರವೂ ಕೂಡ ಶೀರ್ಷಿಕೆಯಂತೆ ಹಾಸ್ಯಮಯದ ಜೊತೆಗೆ ಒಂದಷ್ಟು ಆ್ಯಕ್ಷನ್, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ನಿಂದ ಕೂಡಿದೆಯಂತೆ.
ನಾಗೇಂದ್ರ ಅರಸ್ ನಿರ್ದೇಶನ, ದಿವ್ಯಾ ಚಂದ್ರದರ್ ಮತ್ತು ಯೋಗೇಶ್ ಗೌಡ ನಿರ್ಮಾಣದಲ್ಲಿ ಚಿತ್ರ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಪ್ರಣವ್ ನಾಯಕ ನಟ. ನಾಗೇಂದ್ರ ಅರಸ್ ಚಿತ್ರದ ನಿರ್ದೇಶನದ ಜೊತೆಗೆ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ ಹಾಗೂ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಮ್ಯಾನ್ಲಿಯೋ ಪ್ರೊಡಕ್ಷನ್ ಮಾಲೀಕ ಹಾಗೂ ನಾಯಕ ನಟ ಪ್ರಣವ್ ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿ ಹೊತ್ತಿದ್ದಾರೆ.
ಪ್ರಣವ್ ಈಗಾಗಲೇ 'ಸೈಕೋ ಶಂಕರ' ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಈಗ ಈ ಚಿತ್ರದಲ್ಲೂ ಒಬ್ಬ ಮಧ್ಯಮ ಕುಟುಂಬದಲ್ಲಿ ಹುಟ್ಟಿ ಐಶಾರಾಮಿಯ ಕನಸುಗಳ ಕಾಣುವ ಹುಡುಗನಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಒಂದು ಹಾಡಿಗೆ ನಿರ್ದೇಶಕ ಜೋಗಿ ಪ್ರೇಮ್ ಧ್ವನಿ ನೀಡಿದ್ದಾರೆ.