ಗದಗ: ಸಿನಿಮಾ ನಟರು ರಾಜಕೀಯದಲ್ಲಿ ಸಕ್ಸಸ್ ಆಗಿರೋದು ತುಂಬಾ ವಿರಳ. ಅಭಿಮಾನಿಗಳು ಸ್ಟಾರ್ ನಟರಿಗೆ ಸಿನಿಮಾದಲ್ಲಿ ಕೊಡುವ ಮನ್ನಣೆಯನ್ನು ರಾಜಕೀಯದಲ್ಲಿ ನೀಡುವುದಿಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗುತ್ತಿದೆ.
ರಿಯಲ್ ಸ್ಟಾರ್ ಉಪೇಂದ್ರ ಅವರ ನೂತನ 'ಉತ್ತಮ ಪ್ರಜಾಕೀಯ ಪಕ್ಷ'ದ ಅಧಿಕೃತ ವಾಟ್ಸಪ್ ಗ್ರೂಪ್ಗೆ ಉತ್ತರ ಕರ್ನಾಟಕದ ಜನರ ಭಾಗವಹಿಸುವಿಕೆ ಬಹಳ ವಿರಳ ಆಗಿದೆ. ಅದರಲ್ಲೂ ಗದಗ ಜಿಲ್ಲೆಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 4 ವಿಧಾನಸಭಾ ಕ್ಷೇತ್ರದಲ್ಲಿ ಕೇವಲ 8 ಜನರು ಇದ್ದಾರೆ. ಅದರಲ್ಲಿ ಉಪೇಂದ್ರ ಅವರನ್ನು ಒಳಗೊಂಡು ನಾಲ್ವರು ಅಡ್ಮಿನ್ಗಳಿದ್ದರೆ, ನಾಲ್ವರು ಜನಸಾಮಾನ್ಯರು ಸೇರ್ಪಡೆಯಾಗಿದ್ದಾರೆ. ಸಿನಿಮಾದಲ್ಲಿ ಉಪೇಂದ್ರ ಅವರಿಗೆ ಕೊಟ್ಟ ಪ್ರೋತ್ಸಾಹವನ್ನು ಉತ್ತರ ಕರ್ನಾಟಕದ ಜನರು ಅವರ ಪಕ್ಷಕ್ಕೆ ನೀಡುತ್ತಿಲ್ಲ ಎಂಬುದು ಇದರಿಂದ ತಿಳಿಯುತ್ತದೆ.
ಗದಗ ವಿಧಾನಸಭಾ ಕ್ಷೇತ್ರದ ಅಧಿಕೃತ ಗ್ರೂಪ್ನಲ್ಲಿ ನಾಲ್ವರು (ಅಡ್ಮಿನ್ ಹೊರತು ಪಡಿಸಿ), ನರಗುಂದ ವಿಧಾನಸಭಾ ಕ್ಷೇತ್ರದ ಅಧಿಕೃತ ಗ್ರೂಪ್ನಲ್ಲಿ ಐವರು (ಅಡ್ಮಿನ್ ಹೊರತು ಪಡಿಸಿ), ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಅಧಿಕೃತ ಗ್ರೂಪ್ನಲ್ಲಿ ಆರು ಮಂದಿ (ಅಡ್ಮಿನ್ ಹೊರತು ಪಡಿಸಿ ), ನರಗುಂದ ವಿಧಾನಸಭಾ ಕ್ಷೇತ್ರದ ಅಧಿಕೃತ ಗ್ರೂಪ್ನಲ್ಲಿ 11 ಜನ (ಅಡ್ಮಿನ್ ಹೊರತು ಪಡಿಸಿ) ಇದ್ದಾರೆ.
ಇನ್ನು ಲೋಕಸಭಾ ಚುನಾವಣೆಗೆ ರಾಜಕೀಯ ಚಟುವಟಿಕೆಗಳು ದಿನದಿಂದ ದಿನಕ್ಕೆ ವೇಗ ಪಡೆದುಕೊಂಡಿದ್ದು, ಎಲ್ಲಾ ರಾಜಕೀಯ ಮುಖಂಡರು ಎಲ್ಲಿಲ್ಲದ ಕಸರತ್ತು ನಡೆಸಿದ್ದಾರೆ.ಹಾಗಾಗಿ ಉಪೇಂದ್ರ ಕೂಡಾ ತಮ್ಮ ಪಕ್ಷವನ್ನು ಅಣಿ ಮಾಡುತ್ತಿದ್ದಾರೆ. ಆದರೆ ಪಕ್ಷದ ಹೆಸರಿನಲ್ಲಿ ಎರಡು ತಿಂಗಳ ಹಿಂದೆಯೇ ಅಧಿಕೃತ ವಾಟ್ಸಪ್ ಗ್ರೂಪ್ ಮಾಡಿದ್ದರೂ ಉತ್ತರ ಕರ್ನಾಟಕದ ಗದಗ ಜಿಲ್ಲೆಯಲ್ಲಿ ನಿರೀಕ್ಷಿಸಿದಷ್ಟು ಬೆಂಬಲ ಸಿಗುತ್ತಿಲ್ಲ. ತಮಿಳುನಾಡು ಮತ್ತು ಆಂಧ್ರ ಪ್ರದೇಶದಲ್ಲಿ ಸಿನಿಮಾ ನಟರು ಸ್ವಂತ ಪಕ್ಷ ಕಟ್ಟಿ ಸಿಎಂ ಆಗಿ ಜನರ ಮತ್ತು ಅಭಿಮಾನಿಗಳ ವಿಶ್ವಾಸ ಗಳಿಸಿದಂತೆ ಕರ್ನಾಟಕದಲ್ಲಿ ಯಾವುದೇ ಉದಾಹರಣೆ ಇಲ್ಲ.
ಈ ನಡುವೆ ಹಲವು ವಿಭಿನ್ನ ವಿಚಾರಗಳನ್ನು ಚಲನಚಿತ್ರದ ಮೂಲಕ ರಾಜ್ಯದ ಜನತೆಗೆ ಕೊಟ್ಟು ಸಾಕಷ್ಟು ಅಭಿಮಾನಿಗಳನ್ನು ಗಳಿಸಿರುವ ಉಪೇಂದ್ರ ತಮ್ಮ ವಿಭಿನ್ನ ವಿಚಾರಗಳ ಮೂಲಕ ಹೊಸ ಪಕ್ಷ ಕಟ್ಟಿ ರಾಜಕೀಯದಲ್ಲಿ ಸಕ್ಸಸ್ ಕಾಣುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.