ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರೋ ಚಿತ್ರ ವ್ಹೀಲ್ ಚೇರ್ ರೋಮಿಯೋ. ಯುವ ನಟ ರಾಮ್ ಚೇತನ್, ಮಯೂರಿ, ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲ ನಾಣಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ, ಟ್ರೈಲರ್ನಿಂದಲೇ ಭಾರಿ ಸೌಂಡ್ ಮಾಡುತ್ತಿದೆ.
ವಿಭಿನ್ನ ಕಥಾಹಂದರ ಹೊಂದಿರುವ ವ್ಹೀಲ್ ಚೇರ್ ರೋಮಿಯೋ ಚಿತ್ರದ ರಂಗುರಾಟೆ ಹಾಡು ಜಂಕಾರ್ ಮ್ಯೂಸಿಕ್‌ನಲ್ಲಿ ಬಿಡುಗಡೆ ಆಗಿದೆ. ಗೀತ ರಚನೆಕಾರ ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಹಾಡನ್ನು ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ಸಂಗೀತ ನಿರ್ದೇಶಕ ಬಿ.ಜೆ.ಭರತ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಕಾಲು ಕಳೆದುಕೊಂಡಿರುವ ಹುಡುಗನ ಪಾತ್ರದಲ್ಲಿ ರಾಮ್ ಚೇತನ್ ಅಭಿನಯಿಸಿದ್ದಾರೆ. ಕಣ್ಣಿಲ್ಲದಿರುವ ಹುಡುಗಿಯ ಪಾತ್ರದಲ್ಲಿ ಮಯೂರಿ ಕಾಣಿಸಿಕೊಂಡಿದ್ದಾರೆ. ತಂದೆ, ಮಗನ ಬಾಂಧವ್ಯದ ಸನ್ನಿವೇಶಗಳು ಕೂಡ ಈ ಚಿತ್ರದಲ್ಲಿದೆ. ಜಿ.ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ.ವಿ.ನಾಗೇಂದ್ರ ಪ್ರಸಾದ್ ಹಾಗೂ ಜಯಂತ್ ಕಾಯ್ಕಿಣಿ ಅವರು ಬರೆದಿರುವ ನಾಲ್ಕು ಹಾಡುಗಳು ಈ ಚಿತ್ರದಲ್ಲಿವೆ.
ಸಂತೋಷ್ ಪಾಂಡಿ - ಛಾಯಾಗ್ರಹಣ, ಕಿರಣ್ - ಸಂಕಲನ, ಪಳನಿರಾಜ್ - ಸಾಹಸ ನಿರ್ದೇಶನ ಹಾಗೂ ಕಂಬಿರಾಜು-ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಅಗಸ್ತ್ಯ ಕ್ರಿಯೇಷನ್ಸ್ ಮೂಲಕ ಟಿ.ವೆಂಕಟಾಚಲಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇದನ್ನೂ ಓದಿ: ಲಂಬಾಣಿ ಗೆಟಪ್ನಲ್ಲಿ ಶುಭಾ ಪೂಂಜ.. ಗದಗದಲ್ಲಿ ರೆಡಿಯಾದ ವಿಶಿಷ್ಟ ದಿರಿಸಿನ ತೂಕವೆಷ್ಟು ಗೊತ್ತಾ?
ಮಯೂರಿ ತಾಯಿಯಾಗುವ ಮುನ್ನ ಈ ಚಿತ್ರದ ಚಿತ್ರೀಕರಣ ಮಾಡಲಾಗಿತ್ತು. ಸದ್ಯ ಅವರು ಒಂದು ಮಗುವಿನ ತಾಯಿಯಾಗಿದ್ದು, ಇದೀಗ ವ್ಹೀಲ್ ಚೇರ್ ಚಿತ್ರ ರಿಲೀಸ್ ಆಗುತ್ತಿದೆ. ಚಿತ್ರ ಮಂದಿರಗಳಲ್ಲಿ ಶೇಕಡಾ 100 ರಷ್ಟು ಪ್ರೇಕ್ಷಕರಿಗೆ ಅನುಮತಿ ಸಿಕ್ಕ ಬಳಿಕ ಸಿನಿಮಾ ರಿಲೀಸ್ ಆಗಲಿದೆ.