ಇಡೀ ಭಾರತೀಯ ಚಿತ್ರರಂಗದ ದೃಷ್ಟಿ ತಮಿಳು ನಟ ವಿಜಯ್ ಅಭಿನಯದ 'ಮಾಸ್ಟರ್' ಚಿತ್ರದ ಮೇಲಿತ್ತು. ಆ ಚಿತ್ರವನ್ನು ಜನ ಹೇಗೆ ಸ್ವೀಕರಿಸುತ್ತಾರೆ, ಅದಕ್ಕೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಮತ್ತು ಚಿತ್ರದ ಕಲೆಕ್ಷನ್ ಎಷ್ಟಾಗಬಹುದು ಎಂಬ ಕುತೂಹಲ ಮತ್ತು ನಿರೀಕ್ಷೆ ಎಲ್ಲರಿಗೂ ಇತ್ತು. ಆ ನಿರೀಕ್ಷೆಗೆ 'ಮಾಸ್ಟರ್' ಮೋಸ ಮಾಡಿಲ್ಲ. ಚಿತ್ರವು ಕೇವಲ ಮೂರು ದಿನಗಳಲ್ಲಿ ನೂರು ಕೋಟಿ ಸಂಪಾದಿಸಿದೆ ಎಂದು ಹೇಳಲಾಗುತ್ತಿದೆ. ಈ ಪೈಕಿ 50 ಕೋಟಿ ತಮಿಳುನಾಡಿನಿಂದಲೇ ಬಂದಿದೆಯಂತೆ.
ಒಂದು ಕಡೆ ಕೊರೊನಾ ಭಯ. ಇನ್ನೊಂದು ಕಡೆ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಹಾಜರಾತಿ ಮಾತ್ರ. ಹೀಗಿದ್ದರೂ ಚಿತ್ರವು ಒಳ್ಳೆಯ ಕಲೆಕ್ಷನ್ ಮಾಡುತ್ತಿರುವುದು ಸಾಮಾನ್ಯ ವಿಷಯವೇನಲ್ಲ. ಜನ ಇನ್ನು ಚಿತ್ರಮಂದಿರಕ್ಕೆ ಬರುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದ ಹಿನ್ನೆಲೆಯಲ್ಲಿ ಮಾಸ್ಟರ್ ಚಿತ್ರಕ್ಕೆ ಇಂಥದ್ದೊಂದು ಪ್ರತಿಕ್ರಿಯೆ ಸಿಗುತ್ತಿರುವುದು ಬರೀ ತಮಿಳು ಚಿತ್ರರಂಗವಷ್ಟೇ ಅಲ್ಲ, ಬೇರೆ ಭಾಷೆಗಳ ಚಿತ್ರರಂಗಗಳಿಗೂ ಹೊಸ ಜೋಶ್ ನೀಡಿದೆ. ಮಾಸ್ಟರ್ ಚಿತ್ರಕ್ಕೆ ಬಂದ ಹಾಗೆ ತಮ್ಮ ಚಿತ್ರಗಳಿಗೂ ಜನ ಬಂದು ಗೆಲ್ಲಿಸಬಹುದು ಎಂಬ ನಿರ್ಮಾಪಕರ ನಿರೀಕ್ಷೆ ಹೆಚ್ಚಾಗಿದೆ. ಅದಕ್ಕೆ ಸರಿಯಾಗಿ ಫೆಬ್ರವರಿಯಿಂದ ಪೂರ್ಣಪ್ರಮಾಣದಲ್ಲಿ ಚಿತ್ರಪ್ರದರ್ಶನ ಪ್ರಾರಂಭವಾಗುವ ನಿರೀಕ್ಷೆಗಳಿವೆ.
ಓದಿ: ರಮೇಶ್ ಅರವಿಂದ್ ಮಗಳ ಆರತಕ್ಷತೆಯಲ್ಲಿ ಸ್ಟಾರ್ಸ್ಗಳ ಜೊತೆಗೆ ರಾಜಕೀಯ ಗಣ್ಯರ ಕಲರವ..! ವಿಡಿಯೋ
ಕನ್ನಡ ಚಿತ್ರರಂಗದ ವಿಷಯವನ್ನೇ ತೆಗೆದುಕೊಳ್ಳುವುದಾದರೆ, ಫೆಬ್ರವರಿಯಲ್ಲಿ ಹಲವು ಕನ್ನಡ ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಪ್ರಜ್ವಲ್ ಅಭಿನಯದ ಇನ್‍ಸ್ಪೆಕ್ಟರ್ ವಿಕ್ರಂ, ರಿಷಭ್ ಶೆಟ್ಟಿ ಅಭಿನಯದ ಹೀರೋ, ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್, ರಮೇಶ್ ಅರವಿಂದ್ ಅಭಿನಯದ ಮತ್ತು ನಿರ್ದೇಶನದ 100 ಸೇರಿದಂತೆ ಹಲವರು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗಲಿವೆ ಎಂದು ಹೇಳಲಾಗುತ್ತಿದೆ. ಇನ್ನು ಪೊಗರು ಚಿತ್ರದ ಗೊಂದಲ ಇನ್ನೂ ಮುಂದುವರೆದಿದೆ. ಮೂಲಗಳ ಪ್ರಕಾರ ಚಿತ್ರದ ಕೆಲಸಗಳು ಇನ್ನೂ ಆಗಿಲ್ಲವಾದ್ದರಿಂದ ಏಪ್ರಿಲ್‍ನಲ್ಲಿ ಬಿಡುಗಡೆ ಮಾಡುವುದು ಚಿತ್ರತಂಡದ ಯೋಚನೆಯಾಗಿದೆ. ಆದರೆ, ನಿರ್ಮಾಪಕ ಗಂಗಾಧರ್ ಮಾತ್ರ ಚಿತ್ರವನ್ನು ಫೆಬ್ರವರಿಯಲ್ಲೇ ತೆರೆಗೆ ತರುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪೊಗರು ಬಿಡುಗಡೆಯಾಗುತ್ತದೋ ಇಲ್ಲವೋ ಗೊತ್ತಿಲ್ಲ. ಬೇರೆ ಒಂದಿಷ್ಟು ಚಿತ್ರಗಳು ಬಿಡುಗಡೆಗೆ ಸಿದ್ಧವಿದ್ದು, ಆ ಚಿತ್ರಗಳ ಬಗ್ಗೆ ಪ್ರೇಕ್ಷಕರ ಗಮನ ನೆಟ್ಟಿದೆ. ಮಾಸ್ಟರ್ನಂತೆ ಆ ಚಿತ್ರಗಳು ಸಹ ಪ್ರೇಕ್ಷಕರ ನಂಬಿಕೆ ಉಳಿಸಿಕೊಂಡರೆ ಆಗ ಇನ್ನಷ್ಟು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಅನುಕೂಲವಾಗುತ್ತದೆ.