ಈ ಸಿನಿಮಾ ಪ್ರಪಂಚವೇ ಹಾಗೆ. ಸ್ಟಾರ್ ನಟರ ಮಧ್ಯೆ ಉತ್ಸಾಹಿ ನಿರ್ದೇಶಕರು, ನಟರನ್ನು ಕೈ ಬೀಸಿ ಕರೆಯುತ್ತಲೇ ಇರುತ್ತದೆ. ಇಲ್ಲೊಂದು ಹೊಸಬರ ತಂಡವೊಂದು 'ನಾವೆಲ್ರೂ..ಹಾಫ್ ಬಾಯಿಲ್ಡ್' ಎಂಬ ಹೆಸರಿಟ್ಟುಕೊಂಡು ಸಿನಿಮಾ ತಯಾರಿಸಿದೆ. ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ.
ಇದು ಹಳ್ಳಿ ಸೊಗಡಿನ ನಾಲ್ಕು ಜನ ಹುಡುಗರ ಕಥೆ. ಸುನಿಲ್ ಕುಮಾರ್, ಹಂಪೇಶ್ ಅರಸೂರ್, ಮಂಜು ಬದ್ರಿ ಹಾಗೂ ದೀಪಕ್ ಈ ಸಿನಿಮಾದಲ್ಲಿ ಅಭಿನಯಿಸಿದ್ದು, ಈ ಹೊಸ ಪ್ರತಿಭೆಗಳ ಚಿತ್ರಕ್ಕೆ, ಹಾಸ್ಯ ನಟ ತಬಲಾ ನಾಣಿ ಡೈಲಾಗ್ ಬರೆದಿರುವುದು ವಿಶೇಷ. ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಬಿ.ಶಿವರಾಜ್ ವೆಂಕಟಾಚ್ಚ ಚಿತ್ರಕ್ಕೆ ಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರ ಪ್ರಕಾರ ಇದು ಔಟ್ ಅ್ಯಂಡ್ ಔಟ್ ಕಾಮಿಡಿ ಸಿನಿಮಾವಂತೆ. ಆದರೆ ಈ ಸಿನಿಮಾ ಮಾಡಲು ನಿರ್ದೇಶಕ ಶಿವರಾಜ್ ಹಾಗೂ ಈ ಚಿತ್ರದ ಯುವ ನಟರು ಸಾಕಷ್ಟು ಚಾಲೆಂಜಿಂಗ್ ಎದುರಿಸಿದ್ದಾರಂತೆ.
![Half boiled movie](https://etvbharatimages.akamaized.net/etvbharat/prod-images/kn-bng-04-thabala-nani-bareda-cinema-naverllu-video-7204835_11012020203509_1101f_1578755109_594.jpg)
ಇನ್ನು ಈ ಯುವ ಪ್ರತಿಭೆಗಳ ಸಿನಿಮಾ ಮೇಲಿನ ಆಸಕ್ತಿ ನೋಡಿ ಅಮೀರ್ ಅಹಮದ್ ಎಂಬುವವರು ಹಣ ಹೂಡಲು ಮುಂದೆ ಬಂದಿದ್ದಾರೆ. ಈ ಚಿತ್ರವನ್ನು 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ನಾಲ್ಕು ಹುಡುಗರ ಜೊತೆ ಮಾತಂಗಿ ಪ್ರಸನ್ನ ಹಾಗೂ ಅವಿನ್ಯ ಶೆಟ್ಟಿ ಇಬ್ಬರೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ತಬಲಾ ನಾಣಿ, ಕರಿಸುಬ್ಬು, ಮಜಾ ಟಾಕೀಸ್ ಪವನ್, ಹಿರಿಯ ನಟ ಉಮೇಶ್ ಕೂಡಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ರಮೇಶ್ ಕುಶಂಧರ್ ರೆಡ್ಡಿ ಛಾಯಾಗ್ರಹಣ, ನಾಗೇಂದ್ರ ಕೆ. ಉಜ್ಜನಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಿಜಯ ಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಹಾಡುಗಳಿಗೆ ಬಹದ್ದೂರ್ ಚೇತನ್ ಸಾಹಿತ್ಯವಿದ್ದು, ಬಾಹುಬಲಿ, ಮಗಧೀರ ಸಿನಿಮಾಗಳ ನೃತ್ಯ ನಿರ್ದೇಶಕ ಪ್ರೇಮ್ ರಕ್ಷಿತ್ ಕೊರಿಯೋಗ್ರಫಿ ಮಾಡಿದ್ದಾರೆ. ಚಿತ್ರದ ಟೀಸರ್ ಈಗಾಗಲೇ ರಿವೀಲ್ ಆಗಿದ್ದು ಇದೇ ತಿಂಗಳ 24 ರಂದು ಸಿನಿಮಾ ತೆರೆಗೆ ಬರಲಿದೆ.