ಮುಂಬೈ: ಬಾಲಿವುಡ್ ನಟಿ ತಾಪ್ಸಿ ಅಭಿನಯಿಸುತ್ತಿರುವ ಹೊಸ ಸಿನಿಮಾ ರಶ್ಮಿ ರಾಕೆಟ್ ಚಿತ್ರದ ಚಿತ್ರೀಕರಣ ಇದೇ ನವೆಂಬರ್ ನಲ್ಲಿ ಆರಂಭವಾಗಲಿದೆ ಎಂದು ಸ್ವತಃ ಅವರೆ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.
ನಟಿ ತಾಪ್ಸಿ ಹೊಸ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತಾ, ನಾನು ಪ್ರಾರಂಭದಿಂದಲೂ ಈ ಚಿತ್ರದ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ. ಇದೊಂದು ವಿಶೇಷವಾದ ಪಾತ್ರವಾಗಿದೆ. ಈ ಚಿತ್ರದಲ್ಲಿ ಓಟಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದು, ಅದಕ್ಕಾಗಿ ಬೇಕಾದ ತರಬೇತಿಯನ್ನು ಪಡೆಯುತ್ತಿದ್ದೇನೆ.
ಕೊರೊನಾ ಲಾಕ್ ಡೌನ್ ನಿಂದ ಸಾಕಷ್ಟು ಸಮಯ ಕಳೆದು ಹೋಗಿದ್ದು, ಮತ್ತೆ ನಾನು ಚಿತ್ರದಂಡವನ್ನು ಸೇರುತ್ತಿರುವುದಕ್ಕೆ ಉತ್ಸಕನಾಗಿದ್ದೇನೆ ಎಂದು ಹೇಳಿದ್ದಾರೆ.
ಬಳಿಕ ಚಿತ್ರದ ನಿರ್ದೇಶಕ ಆಕರ್ಷ ಖುರಾನಾ ಮಾತನಾಡಿ, ಕೊರೊನಾ ಸೋಂಕಿನ ನಡುವೆಯೇ ಸಿನಿಮಾದ ಚಿತ್ರೀಕರಣ ನಡೆಸಲು ಚಿತ್ರದ ತಂಡ ಸಿದ್ಧವಾಗಿದೆ. ಮತ್ತೆ ಸಿನಿಮಾದ ಚಿತ್ರೀಕರಣ ಪುನರ್ ಆರಂಭ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ. ಸಿನಿಮಾದ ಚಿತ್ರೀಕರಣ ನಡೆಸಲು ಕುತೂಹಲದಿಂದ ಕಾಯುತ್ತಿದ್ದು, ಕಥೆಯನ್ನು ಹೇಳಲು ನಾನು ಉತ್ಸುಕನಾಗಿದ್ದೇನೆ ಎಂದರು.
ಇನ್ನು ಈ ಸಿನಿಮಾವನ್ನು ರೋನಿ ಸ್ಕ್ರೂವಾಲಾ ಅವರೊಂದಿಗೆ ನೇಹಾ ಆನಂದ್ ಮತ್ತು ಪ್ರಂಜಲ್ ಖಂಡ್ದಿಯಾ ನಿರ್ಮಿಸಲಿದ್ದು, ಈ ಸಿನಿಮಾ 2021 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.