ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಸದ್ಯಕ್ಕೆ ತಮ್ಮ 25ನೇ ಸಿನಿಮಾ 'ಮಹರ್ಷಿ' ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಿದ್ದಾರೆ. ಈ ನಡುವೆ ಹೈದರಾಬಾದ್ನಲ್ಲೇ ಅವರು ತಮ್ಮ ಮೇಣದ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ.
ಹೈದರಾಬಾದ್ನ ಎಬಿಎಂ ಸಿನಿಮಾಸ್ನಲ್ಲಿ ಮಹೇಶ್ ಬಾಬು ತಮ್ಮ ಪತ್ನಿ ನಮ್ರತಾ, ಪುತ್ರ ಗೌತಮ್, ಪುತ್ರಿ ಸಿತಾರಾ ಜೊತೆ ಸೇರಿ ತಮ್ಮ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ. ತಂದೆಯ ಮೇಣದ ಪ್ರತಿಮೆಯನ್ನು ಕಂಡ ಮಕ್ಕಳು ಒಂದು ಕ್ಷಣ ಆಶ್ಚರ್ಯ ಕೂಡಾ ಪಟ್ಟರು. ಮಹೇಶ್ ವ್ಯಾಕ್ಸ್ ಸ್ಟ್ಯಾಚುವನ್ನು ಉದ್ಘಾಟಿಸಲು ಸಿಂಗಾಪುರ್ಗೆ ಹೋಗಬೇಕಿತ್ತು. ಆದರೆ ಕಾರಣಾಂತರಗಳಿಂದ ಅಲ್ಲಿಗೆ ಹೋಗಲು ಸಾಧ್ಯವಾಗದ ಕಾರಣ ಮೇಡಮ್ ಟುಸ್ಸಾಡ್ ಸಂಸ್ಥೆ ಹೈದರಾಬಾದ್ನಲ್ಲೇ ಮೇಣದ ಪ್ರತಿಮೆ ಉದ್ಘಾಟನೆಗೆ ಅವಕಾಶ ಮಾಡಿಕೊಟ್ಟಿದೆ. ಪ್ರತಿಮೆಯನ್ನು ಉದ್ಘಾಟಿಸಿದ ನಂತರ ಮಹೇಶ್ ತಮ್ಮ ಪ್ರತಿರೂಪದೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಹಾಗೂ ಈ ಸಂತೋಷ ದ ಕ್ಷಣವನ್ನು ತಮ್ಮ ಟ್ವಿಟರ್ನಲ್ಲಿ ಷೇರ್ ಮಾಡಿಕೊಂಡಿದ್ದಾರೆ.
ಈ ಮೇಣದ ಪ್ರತಿಮೆಯನ್ನು ತಯಾರಿಸಲು 6 ತಿಂಗಳ ಅವಧಿ ತೆಗೆದುಕೊಂಡಿದ್ದು ಇದಕ್ಕಾಗಿ 12 ಜನರು ಕೆಲಸ ಮಾಡಿದ್ದಾರೆ. ಇಂದು ರಾತ್ರಿ ಮಹೇಶ್ ಮೇಣದ ಪ್ರತಿಮೆಯನ್ನು ಮತ್ತೆ ಸಿಂಗಾಪುರ್ಗೆ ಕೊಂಡೊಯ್ಯಲಾಗುವುದು. ಬಾಹುಬಲಿ ಸಿನಿಮಾ ಬಿಡುಗಡೆಯಾದ ನಂತರ ಪ್ರಭಾಸ್ ಮೇಣದ ಪ್ರತಿಮೆಯನ್ನು ಮೇಡಮ್ ಟುಸ್ಸಾಡ್ ಮ್ಯೂಸಿಯಂನಲ್ಲಿ ಸ್ಥಾಪಿಸಲಾಗಿತ್ತು. ಇದೀಗ ಮಹೇಶ್ ಬಾಬು ಪ್ರತಿಮೆ ಕೂಡಾ ಸ್ಥಾಪನೆಯಾಗುವ ಮೂಲಕ ಈ ಗೌರವ ದೊರೆತ ಎರಡನೇ ಟಾಲಿವುಡ್ ಹೀರೋ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.