ಕನ್ನಡ ಚಿತ್ರರಂಗದಲ್ಲಿ ಮೊದಲಿನಿಂದಲೂ ನಿರ್ದೇಶಕಿಯರ ಸಂಖ್ಯೆ ವಿರಳ. ಇತ್ತೀಚೆಗೆ ಕೆಲವು ಮಹಿಳೆಯರು ನಿರ್ದೇಶನದತ್ತ ಒಲವು ತೋರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಇದೀಗ ಕೊಡಗಿನ ಕೊಡವತಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರು ಬೆಳದಿಂಗಳ ಬಾಲೆ ಸಿನಿಮಾ ಖ್ಯಾತಿಯ, ಸುಮನ್ ನಗರ್ಕರ್ ಮುಖ್ಯಭೂಮಿಕೆಯಲ್ಲಿ ಸಿದ್ಧಗೊಳ್ಳುತ್ತಿರುವ 'ರಂಗಪ್ರವೇಶ' ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ, ನಿರ್ದೇಶಕಿಯಾಗುತ್ತಿದ್ದಾರೆ. ಅದರಲ್ಲೂ ಕೊಡಗಿನ ಕೊಡವತಿ ಪ್ರಥಮ ನಿರ್ದೇಶಕಿ ಎಂಬ ಕೀರ್ತಿ ಅವರಿಗೆ ಸಲ್ಲುತ್ತದೆ.
![Suman Nagarkar is acting in a new Kannada film](https://etvbharatimages.akamaized.net/etvbharat/prod-images/kn-bng-05-rangapravesh-cinemadhali-suman-nagarkar-7204735_23022022184927_2302f_1645622367_562.jpg)
ಯಶೋಧಾ ಅವರು ಸೃಜನಶೀಲರು ಹಾಗೂ ಸದಭಿರುಚಿರುಚಿಯುಳ್ಳ ಸಿನಿಮಾ ಪ್ರೇಮಿ. ಈವರೆಗೆ ಕೊಡವ ಹಾಗೂ ಕನ್ನಡದಲ್ಲಿ ನಾಲ್ಕಾರು ಸಾಮಾಜಿಕ ಕಳಕಳಿಯುಳ್ಳ, ಉತ್ತಮ ಸಂದೇಶಗಳಿರುವ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಈಗ ತಮ್ಮೆಲ್ಲ ಅನುಭವವನ್ನ ಧಾರೆಯೆರೆಯಲು ಸಜ್ಜಾಗಿದ್ದು ಪ್ರಥಮ ಬಾರಿಗೆ 'ರಂಗಪ್ರವೇಶ' ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಕನ್ನಡದ ಪೃಥೆ ಪ್ರಕಟಿತ ಕೃತಿ ಆಧಾರಿತ ಚಿತ್ರ: ಜವಾಬ್ದಾರಿಯಿಂದ ಸಂಸಾರ ನಿಭಾಯಿಸುತ್ತಾ ಮಗಳ ಭರತನಾಟ್ಯ ಕಲೆಗೆ ಪ್ರೋತ್ಸಾಹಿಸುವ ಮತ್ತು ಆ ಮೂಲಕ ಮಗಳ ಉಜ್ವಲವಾದ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಶ್ರಮಿಸುವ ಒಬ್ಬ ತಾಯಿ ಹಾಗೂ ಮಗಳ ಬಾಂಧವ್ಯ ಕಟ್ಟಿಕೊಡುವ ಸ್ತ್ರೀ ಸಂವೇದನೆಯುಳ್ಳ ಕಥಾ ಹಂದರವೇ ಈ “ರಂಗಪ್ರವೇಶ”.
![Suman Nagarkar is acting in a new Kannada film](https://etvbharatimages.akamaized.net/etvbharat/prod-images/kn-bng-05-rangapravesh-cinemadhali-suman-nagarkar-7204735_23022022184927_2302f_1645622367_900.jpg)
ಚಿತ್ರದಲ್ಲಿ ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರ್ಕರ್ ಮುಖ್ಯಭೂಮಿಕೆಯಲ್ಲಿದ್ದು, ಎಂ ಡಿ ಕೌಶಿಕ್, ಪುಷ್ಪಸ್ವಾಮಿ, ಕು.ರೇಣುಕಾ, ವಿದುಷಿ ರೋಹಿಣಿ ಅನಂತ್, ಬಸವರಾಜ್ ಎಸ್ ಮೈಸೂರು, ಕುಮಾರ್ ಎಸ್ ಮುಂತಾದವರಿದ್ದಾರೆ. ವಿಶೇಷ ಪಾತ್ರದಲ್ಲಿ ಮಾಜಿ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್ ಸೇರಿದಂತೆ ಇತರರು ಕಾಣಿಸಿಕೊಳ್ಳಲಿದ್ದಾರೆ.
ಪಿವಿಆರ್ ಸ್ವಾಮಿಯವರ ಛಾಯಾಗ್ರಹಣ ಮತ್ತು ತಾಂತ್ರಿಕ ಸಲಹೆ ಚಿತ್ರಕ್ಕಿದೆ. ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡ ಹಾಗೂ ಡಾ. ಸಮತಾ ಬಿ ದೇಶಮಾನೆ ಅವರ ಗೀತ ರಚನೆ ಜೊತೆಗೆ ವಿಶ್ವನಾಥ್ ಅವರ ಸಂಗೀತ, ಸ.ಹರೀಶ್ ಅವರ ಕಥೆ-ಸಂಭಾಷಣೆ, ನಾಗೇಶ್ ಎನ್ ಅವರ ಸಂಕಲನ ಚಿತ್ರಕ್ಕಿದೆ.
![Suman Nagarkar is acting in a new Kannada film](https://etvbharatimages.akamaized.net/etvbharat/prod-images/kn-bng-05-rangapravesh-cinemadhali-suman-nagarkar-7204735_23022022184927_2302f_1645622367_25.jpg)
ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು 15 ದಿನಗಳ ಕಾಲ ಚಿತ್ರೀಕರಿಸುವ ಉದ್ಧೇಶವನ್ನು ಚಿತ್ರತಂಡ ಹೊಂದಿದೆ. ಈ ಚಿತ್ರವನ್ನು ಎಮರಾಲ್ಡ್ ಬ್ಯಾನರ್ ಅಡಿಯಲ್ಲಿ ಶ್ರೀ ಎಂ ಡಿ ಕೌಶಿಕ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರಲು ಎಲ್ಲ ರೀತಿಯ ಸಿದ್ಧತೆ ನಡೆದಿದೆ.