ಸುಮಲತ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಅವರ ವೈಯಕ್ತಿಕ ನಿರ್ಧಾರಕ್ಕೆ ಬಿಟ್ಟದ್ದು ಎಂದು ನಟ ಶಿವರಾಜ್ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವ ಮೂತ್ರಪಿಂಡ ದಿನಾಚರಣೆಯ ಅಂಗವಾಗಿ ನಗರದ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಣ್ಣ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಮಹಿಳಾ ದಿನಾಚರಣೆಯಂದು ಹೆಚ್.ಡಿ.ರೇವಣ್ಣ ಸುಮಲತ ಅಂಬರೀಶ್ ಅವರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಿವಣ್ಣ ಪ್ರತಿಕ್ರಿಯಿಸಿದರು. 'ಸುಮಲತ ಅವರು ಚುನಾವಣೆಗೆ ಸ್ಪರ್ಧಿಸುವುದು ಬಿಡುವುದು ಅವರಿಗೆ ಬಿಟ್ಟ ವಿಷಯ. ಅಂಬರೀಶ್ ನನ್ನ ತಂದೆ ಸಮಾನ. ಅವರ ಬಗ್ಗೆ ನನಗೆ ಯಾವಾಗಲೂ ಗೌರವ ಇದ್ದೇ ಇರುತ್ತದೆ. ಸುಮಲತ ಅವರಿಗೆ ಒಳ್ಳೆಯದಾಗಲಿ' ಎಂದು ಹೇಳಿದರು.
ಇನ್ನು ತಮ್ಮ ಪತ್ನಿ ಗೀತ ಅವರ ರಾಜಕೀಯ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ಒಬ್ಬ ಗಂಡನಾಗಿ ನನ್ನ ಕರ್ತವ್ಯವನ್ನು ನಿಭಾಯಿಸಬೇಕು. ನನ್ನ ಪತ್ನಿಯನ್ನು ನಾನು ಪ್ರೀತಿಸುತ್ತೇನೆ. ಆದ್ದರಿಂದ ಆಕೆಯನ್ನು ಬೆಂಬಲಿಸುತ್ತೇನೆ' ಎಂದು ಹೇಳಿದರು.