ಕನ್ನಡ ಚಿತ್ರರಂಗವಲ್ಲದೆ ಪರಭಾಷೆಯಲ್ಲೂ ಸೌಂಡ್ ಮಾಡುತ್ತಿರುವ ಸಿನಿಮಾ '100'. ನಟ ಹಾಗು ನಿರ್ದೇಶಕ ರಮೇಶ್ ಅರವಿಂದ್ ನಟಿಸಿ ಹಾಗು ನಿರ್ದೇಶಿಸಿರುವ ಈ ಸಿನಿಮಾವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ನೋಡಿ ಮೆಚ್ಚಿಕೊಂಡಿದ್ದಾರೆ.
ಸೈಬರ್ ಕ್ರೈಂ ಕಥೆ ಆಧರಿಸಿರು ಸಿನಿಮಾ ಸೋಷಿಯಲ್ ಮೀಡಿಯಾದಿಂದ ಯುವ ಜನಾಂಗ ಹೇಗೆ ತೊಂದರೆ ಅನುಭವಿಸುತ್ತಿದೆ ಅನ್ನೋದನ್ನು ಅಚ್ಚುಕಟ್ಟಾಗಿ ತೋರಿಸಿದೆ. ಇದೀಗ ಈ ಸಿನಿಮಾವನ್ನು ನಿರ್ಮಾಪಕ ಎಂ.ರಮೇಶ್ ರೆಡ್ಡಿ ಅವರು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರಿಗೆ ತೋರಿಸುವುದಾಗಿ ಹೇಳಿದ್ದಾರೆ.
ಒಂದು ಕಾಲದಲ್ಲಿ ಗುತ್ತಿಗೆದಾರನಾಗಿದ್ದ ರಮೇಶ್ ರೆಡ್ಡಿ ಬೆಳವಣಿಗೆಗೆ ಸುಧಾಮೂರ್ತಿಯವರ ಬೆಂಬಲವಿದ್ದು, ಇಂದು ಅವರು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು ಯಶಸ್ವಿಯಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ '100' ಸಿನಿಮಾ, 'ಗಾಳಿಪಟ 2' ಸೇರಿದಂತೆ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಎಂ.ರಮೇಶ್ ರೆಡ್ಡಿ, ಸೂರಜ್ ಪ್ರೊಡಕ್ಷನ್ ಹೌಸ್ ಅಡಿ ಸಂದೇಶ ಸಾರುವ ಸಿನಿಮಾಗಳನ್ನು ಮಾಡುತ್ತಿದ್ದಾರೆ. ರಮೇಶ್ ರೆಡ್ಡಿ ಕೆಲಸಗಳಿಗೆ ಸುಧಾಮೂರ್ತಿ ಸ್ಫೂರ್ತಿ ಅಂತೆ.
ಸುಧಾಮೂರ್ತಿಯವರ ಜೊತೆಗೆ ಹಲವಾರು ವರ್ಷಗಳಿಂದ ಒಡನಾಟ ಹೊಂದಿರುವ ರೆಡ್ಡಿ, ಸುಧಾಮೂರ್ತಿ ಮಾಡುವ ಸಮಾಜಮುಖಿ ಕೆಲಸಗಳಲ್ಲಿ ಮುಖ್ಯ ಪಾತ್ರವಹಿಸುತ್ತಾರೆ. ಇನ್ನು, ರಮೇಶ್ ರೆಡ್ಡಿಯವರು ಸುಧಾಮೂರ್ತಿ ಅವರನ್ನು ದೇವರಿಗೆ ಹೋಲಿಸುತ್ತಾರೆ.