ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್ ಚಿತ್ರ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ನಡುವೆ ಸಿನಿಮಾ ರಿಲೀಸ್ಗೂ ಮುನ್ನವೇ ನಿರ್ದೇಶಕ ಕೃಷ್ಣ ಹಾಗೂ ನಟ ಕಿಚ್ಚ ಸುದೀಪ್ ಹಲವು ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.
ಈ ಮೊದಲು ಪೈಲ್ವಾನ್ ಚಿತ್ರ ಕನ್ನಡ, ತಮಿಳು, ತೆಲುಗು, ಮಲಯಾಳಂ, ಭೋಜ್ಪುರಿ, ಮರಾಠಿ, ಬೆಂಗಾಲಿ, ಪಂಜಾಬಿ ಸೇರಿ ಒಟ್ಟು ಎಂಟು ಭಾಷೆಗಳಲ್ಲಿ ರಿಲೀಸ್ಗೆ ಪ್ಲಾನ್ ಮಾಡಲಾಗಿತ್ತು. ಇದೀಗ ಈ ಪಟ್ಟಿಗೆ ಹಿಂದಿ ಭಾಷೆಯೂ ಸೇರ್ಪಡೆಗೊಂಡಿದೆ. ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಖಚಿತ ಮಾಹಿತಿ ಲಭ್ಯವಾಗಲಿದೆ.
ಇಷ್ಟು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿರುವುದರಿಂದ ಸಹಜವಾಗಿ ನಿರ್ದೇಶಕ ಕಂ ನಿರ್ಮಾಪಕ ಕೃಷ್ಣ ಒತ್ತಡದಲ್ಲಿದ್ದಾರೆ. ಆಯಾ ಭಾಷೆಯ ನೆಲಕ್ಕೆ ಹೋಗಿ ಅಲ್ಲಿಯೇ ಸಿನಿಮಾ ಪ್ರಚಾರ ಮಾಡುವ ಆಲೋಚನೆ ಹಾಕಿದ್ದಾರೆ. ಸದ್ಯ ಚೆನ್ನೈನಲ್ಲಿ ಬೀಡುಬಿಟ್ಟಿರುವ ಅವರು, ತಮಿಳು ಅವತರಣಿಕೆ ಕುರಿತು ಚರ್ಚೆ ನಡೆಸಿದ್ದಾರೆ. ಬಳಿಕ ಹೈದರಬಾದ್, ಕೊಚ್ಚಿ ಹೀಗೆ ಮುಂತಾದ ನಗರಗಳಿಗೆ ಭೇಟಿ ನೀಡಲಿದ್ದಾರೆರಂತೆ.
ಇನ್ನು ಎಲ್ಲ ಭಾಷೆಗಳಲ್ಲಿಯೂ 'ಪೈಲ್ವಾನ್' ಶೀರ್ಷಿಕೆಯಲ್ಲಿಯೇ ಸಿನಿಮಾ ಬಿಡುಗಡೆ ಆಗಲಿದೆಯಂತೆ. ಮತ್ತೊಂದೆಡೆ ಟೀಸರ್ನಲ್ಲಿ ಬೇಸಿಗೆ ಹೊತ್ತಲ್ಲಿ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಸುದ್ದಿ ಹರಿಡಿತ್ತು. ಆದರೆ, ಚುನಾವಣೆ ವೇಳೆ ಚಿತ್ರಮಂದಿರದತ್ತ ಜನ ಸುಳಿಯುತ್ತಾರೆಯೋ ಇಲ್ಲವೋ ಎನ್ನುವ ಕಾರಣಕ್ಕೆ ಬಿಡುಗಡೆಯ ದಿನ ಬದಲಾಗಲಿದೆ. ಲೋಕ ಸಭೆ ಚುನಾವಣಾ ಫಲಿತಾಂಶದ ನಂತರ ಪೈಲ್ವಾನ್ ಸಿನಿಮಾ ರಿಲೀಸ್ ಮಾಡುವ ಪ್ಲಾನ್ನಲ್ಲಿದ್ದಾರೆ ನಿರ್ದೇಶಕ ಕೃಷ್ಣ.
ಈ ಚಿತ್ರದಲ್ಲಿ ಸುದೀಪ್ ಪೈಲ್ವಾನ್ ಮತ್ತು ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದು, ಇವರಿಗೆ ಆಕಾಂಕ್ಷಾ ಸಿಂಗ್ ನಾಯಕಿಯಾಗಿದ್ದಾರೆ. ಇತ್ತೀಚೆಗಷ್ಟೇ ಇಬ್ಬರ ಕಾಂಬಿನೇಷನ್ನ ಫೋಟೋವೊಂದನ್ನು ನಿರ್ದೇಶಕರು ಬಿಡುಗಡೆ ಮಾಡಿದ್ದಾರೆ. ಇನ್ನುಳಿದಂತೆ ಸುನೀಲ್ ಶೆಟ್ಟಿ, ಸುಶಾಂತ್ ಸಿಂಗ್, ಕಬೀರ್ ದುಹಾನ್ ಸಿಂಗ್ ಹೀಗೆ ಬಹು ತಾರಾಗಣ ಈ ಚಿತ್ರದಲ್ಲಿದೆ..