ಇಂದು ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಹುಟ್ಟಿದ ದಿನ. ಈ ಬಾರಿ ಸುದೀಪ್ ತಮ್ಮ 47ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬದವರೊಂದಿಗೆ ಸರಳವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಸ್ವಲ್ಪ ನಿರಾಸೆ ಆದರೂ ಎಲ್ಲರ ಸುರಕ್ಷತೆಯ ದೃಷ್ಟಿಯಿಂದ ಸುದೀಪ್ ಈ ನಿರ್ಧಾರ ಮಾಡಿದ್ದಾರೆ.
ಸುದೀಪ್ ಸದ್ಯಕ್ಕೆ 'ಫ್ಯಾಂಟಮ್' ಚಿತ್ರೀಕರಣದಲ್ಲಿ ಬ್ಯುಸಿ ಇದ್ದು 3 ದಿನಗಳ ಮಟ್ಟಿಗೆ ಶೂಟಿಂಗ್ನಿಂದ ಬ್ರೇಕ್ ಪಡೆದು ಬೆಂಗಳೂರಿಗೆ ಬಂದಿದ್ದಾರೆ. ನಿನ್ನೆಯಷ್ಟೇ ಸುದೀಪ್ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಪಡೆದು ಶ್ರೀ ಸಿದ್ಧಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ. ಇಂದು ಕುಟುಂಬದೊಂದಿಗೆ ಕಾಲ ಕಳೆದು ಮತ್ತೆ ಹೈದರಾಬಾದ್ಗೆ ಹಿಂತಿರುಗಲಿದ್ದಾರೆ ಸುದೀಪ್.
'ರಾಜ್ಯದಲ್ಲಿ ಇನ್ನೂ ಕೊರೊನಾ ಹಾವಳಿ ಕಡಿಮೆಯಾಗದ ಕಾರಣ ಈ ಬಾರಿ ನಾನು ನಿಮ್ಮೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ನಿಮ್ಮ ಕುಟುಂಬವೇ ನನ್ನ ಕುಟುಂಬ, ನಿಮ್ಮ ಸುರಕ್ಷತೆ ನನಗೆ ಮುಖ್ಯ ಆದ್ದರಿಂದ ಅಭಿಮಾನಿಗಳು ಮನೆ ಬಳಿ ಬರಬೇಡಿ' ಎಂದು ಸುದೀಪ್ ಮನವಿ ಮಾಡಿದ್ದರು. ಅಭಿಮಾನಿಗಳು ಮಾತ್ರ ಸೋಷಿಯಲ್ ಮೀಡಿಯಾ ಮೂಲಕ ಹಾಗೂ ತಾವು ಇರುವಲ್ಲಿಯೇ ಕಿಚ್ಚನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮುಂದಾಗಿದ್ದಾರೆ.
2 ಸೆಪ್ಟೆಂಬರ್ 1973 ರಲ್ಲಿ ಸಂಜೀವ್ ಮಂಜಪ್ಪ ಹಾಗೂ ಸರೋಜ ದಂಪತಿ ಪುತ್ರನಾಗಿ ಶಿವಮೊಗ್ಗದಲ್ಲಿ ಜನಿಸಿದ ಸುದೀಪ್, ಒಂದೇ ಬಾರಿಗೆ ಸ್ಟಾರ್ ಆದವರಲ್ಲ. ಧಾರಾವಾಹಿಗಳಲ್ಲಿ ನಟಿಸಿ 'ತಾಯವ್ವ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು. ಇದಾದ ನಂತರ ಪ್ರತ್ಯರ್ಥ, ಸ್ಪರ್ಶ ಚಿತ್ರಗಳಲ್ಲಿ ನಟಿಸಿದರೂ ಅವರಿಗೆ ಬ್ರೇಕ್ ನೀಡಿದ್ದು, ಸ್ಟಾರ್ ಪಟ್ಟ ನೀಡಿದ್ದು 2001 ರಲ್ಲಿ ಬಿಡುಗಡೆಯಾದ 'ಹುಚ್ಚ' ಸಿನಿಮಾ. ಕಿಚ್ಚ, ಸ್ವಾತಿಮುತ್ತು, ರಂಗ ಎಸ್ಎಸ್ಎಲ್ಸಿ, ಮೈ ಆಟೋಗ್ರಾಫ್, ಮುಸ್ಸಂಜೆ ಮಾತು, ಕೆಂಪೇಗೌಡ, ದಿ ವಿಲನ್, ಪೈಲ್ವಾನ್ ಸೇರಿ ಹಲವಾರು ಚಿತ್ರಗಳಲ್ಲಿ ನಟಿಸಿರುವ ಸುದೀಪ್ ಸದ್ಯಕ್ಕೆ 'ಫ್ಯಾಂಟಮ್' ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಕೋಟಿಗೊಬ್ಬ-3 ಬಿಡುಗಡೆಯಾಗಬೇಕಿದೆ.
ಸುದೀಪ್ ಕನ್ನಡ ಚಿತ್ರರಂಗ ಮಾತ್ರವಲ್ಲ ಹಿಂದಿ, ತಮಿಳು, ತೆಲುಗು ಚಿತ್ರಗಳಲ್ಲೂ ನಟಿಸಿ ದೇಶಾದ್ಯಂತ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಿಂದಿಯ ರಣ್, ಫೂಂಕ್ 2, ರಕ್ತ ಚರಿತ್ರ್, ದಬಾಂಗ್ 3, ತೆಲುಗಿನ ಈಗ, ಬಾಹುಬಲಿ, ಸೈ ರಾ ನರಸಿಂಹರೆಡ್ಡಿ, ತಮಿಳಿನ ಪುಲಿ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದಾರೆ. ಆ್ಯಕ್ಟಿಂಗ್ ಮಾತ್ರವಲ್ಲ ಬಿಗ್ ಬಾಸ್ ಮೂಲಕ ನಿರೂಪಕನಾಗಿ ಕೂಡಾ ಸುದೀಪ್ ಮಿಂಚಿದ್ದಾರೆ. ಅನೇಕ ಚಿತ್ರಗಳಿಗೆ ಧ್ವನಿ ನೀಡಿದ್ದಾರೆ. ಹಲವು ಹಾಡುಗಳನ್ನೂ ಹಾಡಿ ಗಾಯಕನಾಗಿಯೂ ಗುರುತಿಸಿಕೊಂಡಿದ್ದಾರೆ. 'ಜಿಗರ್ಥಂಡ', 'ಅಂಬಿ ನೀಂಗ್' ವಯಸ್ಸಾಯ್ತೋ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.
ಮೈ ಆಟೋಗ್ರಾಫ್, #73 ಶಾಂತಿ ನಿವಾಸ, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ, ಮಾಣಿಕ್ಯ ಸಿನಿಮಾಗಳನ್ನು ನಿರ್ದೇಶಿಶಿ ಉತ್ತಮ ನಿರ್ದೇಶಕ ಎನ್ನುವುದನ್ನೂ ಪ್ರೂವ್ ಮಾಡಿದ್ದಾರೆ. ಇವೆಲ್ಲದರ ಜೊತೆಗೆ ಟ್ರಸ್ಟ್ ಒಂದನ್ನು ಸ್ಥಾಪಿಸಿ ಸಮಾಜ ಸೇವೆಯನ್ನೂ ಮಾಡುತ್ತಾ ಬಂದಿದ್ದಾರೆ ಕಿಚ್ಚ. ಕನ್ನಡ ಚಿತ್ರರಂಗಕ್ಕೆ ಸುದೀಪ್ ಮತ್ತಷ್ಟು ಕೊಡುಗೆ ನೀಡಲಿ, ಅವರ ಸಮಾಜ ಸೇವೆ ಇದೇ ರೀತಿ ಮುಂದುವರೆಯಲಿ ಎಂದು ಹಾರೈಸೋಣ. ಈಟಿವಿ ಭಾರತದ ವತಿಯಿಂದ ಸುದೀಪ್ ಅವರಿಗೆ ಜನ್ಮದಿನದ ಶುಭಾಶಯಗಳು.