ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬಹು ನಿರೀಕ್ಷೆಯ ಸಿನಿಮಾಗಳ ಟ್ರೈಲರ್ ಅನ್ನು ಕನ್ನಡ, ತೆಲುಗು, ತಮಿಳು ಹಾಗು ಮಲೆಯಾಳಂ ಸ್ಟಾರ್ಗಳು ರಿಲೀಸ್ ಮಾಡುವ ಟ್ರೆಂಡ್ ಶುರುವಾಗಿದೆ. ಈಗ ಕಾಲಿವುಡ್ 'ಸಿಂಬು' ಅಭಿನಯದ 'ಮಾನಡು' ಸಿನಿಮಾ ಬಹುಭಾಷೆಯಲ್ಲಿ ತೆರೆಕಾಣಲು ಸಜ್ಜಾಗಿದ್ದು, ಈ ಚಿತ್ರಕ್ಕೆ ಸ್ಟಾರ್ ನಟರ ಜೊತೆಗೆ ಸ್ಟಾರ್ ಡೈರೆಕ್ಟರ್ ಕೈ ಜೋಡಿಸಿದ್ದಾರೆ.
ಫೆಬ್ರವರಿ 3 ರಂದು ಸಿಂಬು ನಟನೆಯ 'ಮಾನಡು' ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ಐದು ಭಾಷೆಯಲ್ಲಿ ಮಾನಡು ಟೀಸರ್ ಬಿಡುಗಡೆಯಾಗುತ್ತಿದ್ದು, ಕನ್ನಡದಲ್ಲಿ ಕಿಚ್ಚ ಸುದೀಪ್ ರಿಲೀಸ್ ಮಾಡುವ ಮೂಲಕ ಸಿಂಬು ಸಾಥ್ ನೀಡಲಿದ್ದಾರೆ. ನಾಳೆ ಮಧ್ಯಾಹ್ನ 2.34 ಗಂಟೆಗೆ ಮಾನಡು ಕನ್ನಡ ಟೀಸರ್ ಅನಾವರಣ ಆಗಲಿದೆ.
ತೆಲುಗಿನಲ್ಲಿ ನಟ ರವಿತೇಜ ಮಾನಡು ಟೀಸರ್ ರಿಲೀಸ್ ಮಾಡುತ್ತಿದ್ದಾರೆ. ಮಲಯಾಳಂ ಭಾಷೆಯಲ್ಲಿ ಪೃಥ್ವಿರಾಜ್ ಸುಕುಮಾರ್ ಬಿಡುಗಡೆ ಮಾಡುತ್ತಿದ್ದಾರೆ. ಹಾಗೂ ಹಿಂದಿಯಲ್ಲಿ ಸ್ಟಾರ್ ನಿರ್ದೇಶಕ ಅನುರಾಗ್ ಕಶ್ಯಪ್ ಸಾಥ್ ನೀಡುತ್ತಿದ್ದಾರೆ. ವೆಂಕಟ್ ಪ್ರಭು ಈ ಚಿತ್ರ ನಿರ್ದೇಶಿಸಿದ್ದು, ಸುರೇಶ್ ಕೆ ನಿರ್ಮಾಣ ಮಾಡಿದ್ದಾರೆ.
ಸಿಂಬು ಜೊತೆ ಕಲ್ಯಾಣಿ ಪ್ರಿಯಾದರ್ಶನಿ, ಎಸ್‌ಜೆ ಸೂರ್ಯ, ಭಾರತೀರಾಜ, ಎಸ್‌ಎ ಚಂದ್ರಶೇಖರ್, ಕರುಣಾಕರ್ಣನ್, ಮನೋಜ್ ಭಾರತೀರಾಜ, ಉದಯ, ಅರವಿಂದ್ ಆಕಾಶ್, ರವಿಕಾಂತ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ತಾರಬಳಗದಲ್ಲಿದ್ದಾರೆ.