ಕನ್ನಡ ಅಲ್ಲದೇ ತೆಲುಗು, ತಮಿಳು ಹಾಗು ಮಲೆಯಾಲಂ ಟ್ರೈಲರ್‌ನಿಂದಲೇ ಸಖತ್ ಸೌಂಡ್ ಮಾಡುತ್ತಿರುವ ಸಿನಿಮಾ ಪುಷ್ಪ. ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ಅಲ್ಲು ಸರ್ಜುನ್ ಅಭಿನಯದ ಔಟ್ ಅಂಟ್ ಔಟ್ ಮಾಸ್ ಎಲಿಮೆಂಟ್ಸ್ ಹೊಂದಿರುವ ಪುಷ್ಪ ಸಿನಿಮಾ ಡಿಸೆಂಬರ್ 17ಕ್ಕೆ ದೇಶದ್ಯಾಂತ ತೆರೆ ಕಾಣುತ್ತಿದೆ.
ಈ ಹಿನ್ನಲೆಯಲ್ಲಿ ಪುಷ್ಪ ಸಿನಿಮಾ ತಂಡ ಮುಂಬೈ, ಹೈದರಾಬಾದ್, ಚನ್ನೈನಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದೆ. ಅದೇ ರೀತಿ ಕರ್ನಾಟಕದಲ್ಲೂ ಹೆಚ್ಚು ಅಭಿಮಾನಿ ಬಗಳ ಹೊಂದಿರುವ ಅಲ್ಲು ಅರ್ಜುನ್, ಪುಷ್ಪ ಸಿನಿಮಾ ಪ್ರಮೋಷನ್ಗಾಗಿ ಬೆಂಗಳೂರಿಗೆ ಬಂದಿದ್ದರು.
ಕನ್ನಡದಲ್ಲೂ ಪುಷ್ಪ ಸಿನಿಮಾ ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಹೋಟೆಲ್ನಲ್ಲಿ ಪುಷ್ಪ ಚಿತ್ರತಂಡ ಬೆಳಗ್ಗೆ 11.30ಕ್ಕೆ ಪತ್ರಿಕಾಗೋಷ್ಠಿ ಕರೆದಿತ್ತು. ಆದರೆ, ಎರಡುವರೆ ಗಂಟೆ ತಡವಾಗಿ ಬಂದ ಅಲ್ಲು ಅರ್ಜುನ್ ಕನ್ನಡ ಮಾಧ್ಯಮಗಳ ಬಳಿ ಕ್ಷಮೆ ಕೇಳುವಂತಾಯಿತು.
ತಡವಾಗಿ ಬಂದ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಸೀದಾ ವೇದಿಕೆ ಮೇಲೆ ಬಂದು ತಮ್ಮ ಪುಷ್ಪ ಸಿನಿಮಾದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಧನಂಜಯ್ ಕೂಡ ಇದ್ದರು.
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಮಾಧ್ಯಮ ಪ್ರತಿನಿಧಿಗಳು ಸುಮಾರು ಎರಡುವರೆ ಗಂಟೆಗಳಿಗೂ ಹೆಚ್ಚು ಕಾಲ ಅಲ್ಲು ಅರ್ಜುನ್‌ಗಾಗಿ ಕಾದಿದ್ದರು. ಆದರೆ, ಬಂದ ಕೂಡಲೇ ಸೌಜ್ಯನಕ್ಕೂ ಯಾಕೆ ತಡವಾಗಿ ಬಂದರು ಎಂದು ಹೇಳಲಿಲ್ಲ. ಹಾಗಾಗಿ, ಮಾಧ್ಯಮದ ವರದಿಗಾರರು ಈ ಪ್ರಶ್ನೆಯನ್ನು ಅಲ್ಲು ಅರ್ಜುನ್ ಅವರಿಗೆ ಕೇಳಿದರು.
ದಯವಿಟ್ಟು ಕ್ಷಮಿಸಿ, ನನಗೆ ಈ ವಿಚಾರ ಗೊತ್ತಿರಲಿಲ್ಲ. ನಾನು ಖಾಸಗಿ ವಿಮಾನದಲ್ಲಿ ಬಂದೆ. ವಾತಾವರಣ ವೈಪರೀತ್ಯದಿಂದ ವಿಮಾನ ಲೇಟ್ ಆಯಿತು. ನನಗೆ ಯಾರಿಗೂ ನೋವುಂಟು ಮಾಡಲು ಇಷ್ಟ ಇಲ್ಲ. ಹಾಗಾಗಿ, ಕ್ಷಮೆ ಕೇಳುತ್ತೇನೆ. ತುಂಬಾ ಹೊತ್ತು ಕಾಯಿಸಿದ್ದಕ್ಕೆ ಎಲ್ಲಾ ಮಾಧ್ಯಮಗಳಿಗೂ ಕ್ಷಮೆ ಯಾಚಿಸುತ್ತೇನೆ ಎಂದು ಅಲ್ಲು ಅರ್ಜುನ್ ಕ್ಷಮೆ ಕೇಳಿದರು.
ಮತ್ತೊಂದು ಕಡೆ ಅಲ್ಲು ಅರ್ಜುನ್ ನೋಡಲು ಅಭಿಮಾನಿಗಳ ಸಾಗರವೇ ಹೋಟೆಲ್ ಬಳಿ ಜಮಾಯಿಸಿತ್ತು. ಕೊನೆಗೆ ಅಲ್ಲು ಅರ್ಜುನ್ ಹೋಗುವ ಮುನ್ನ ಅಭಿಮಾನಿಗಳಿಗೆ ದರ್ಶನ ಕೊಟ್ಟು, ಅಭಿಮಾನಿಗಳ ಕೈ ಕುಲಿಕಿದರು. ಮಾಧ್ಯಮ ಮುಂದೆ ಕ್ಷಮೆ ಕೇಳಿದ ಸ್ಟೈಲಿಷ್ ಸ್ಟಾರ್ ಅಭಿಮಾನಿಗಳ ಅಭಿಮಾನ ನೋಡಿ ಸಂತೋಷಗೊಂಡರು.
ಇದನ್ನೂ ಓದಿ : ನಾನೀಗ ಅಪ್ಪು ಸಾರ್ ಮನೆಗೆ ಹೋಗುವುದಿಲ್ಲ: ಅಲ್ಲು ಅರ್ಜುನ್ ಹಾಗೆ ಹೇಳಿದ್ಯಾಕೆ?