ಬೆಂಗಳೂರು: ಸೆಪ್ಟೆಂಬರ್ 18ರಂದು ಡಾ. ವಿಷ್ಣುವರ್ಧನ್ ಹುಟ್ಟುಹಬ್ಬ. ಈ ವಿಶೇಷ ದಿನದ ಅಂಗವಾಗಿ ಸೆಪ್ಟೆಂಬರ್ 18, 19 ಹಾಗೂ 20 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ‘ಕನ್ನಡಿಗರ ಯಜಮಾನ, ನಿಮಗಿದೋ ರಂಗ ನಮನ’ ಎಂಬ ಘೋಷವಾಕ್ಯದೊಂದಿಗೆ ನಾಟಕೋತ್ಸವ ನಡೆಯಲಿದೆ.
ಉತ್ತರ ಕರ್ನಾಟಕ, ದಕ್ಷಿಣ ಕನ್ನಡ, ಹಳೇ ಮೈಸೂರು ಭಾಗ.. ಹೀಗೆ ಇಡೀ ಕರ್ನಾಟಕದ ಎಲ್ಲಾ ಪ್ರಾಂತ್ಯಗಳ ಭಾಷಾ ಪ್ರಕಾರಗಳನ್ನು ಒಳಗೊಂಡ 6 ವಿಭಿನ್ನ ನಾಟಕಗಳು ಪ್ರದರ್ಶನ ಕಾಣಲಿರುವುದು ವಿಶೇಷ. ‘ಚೋರ ಚರಣದಾಸ’, ‘ಊರು ಸುಟ್ರೂ ಹನುಮಪ್ಪ ಹೊರಗ’, ‘ಶರೀಫ’, ‘ವೇಷ’, ‘ಗುಲಾಬಿ ಗ್ಯಾಂಗ್’ ನಾಟಕಗಳು ಪ್ರದರ್ಶನಕ್ಕೆ ಆಯ್ಕೆ ಆಗಿವೆ. ನಾಟಕೋತ್ಸವದ ಉಸ್ತುವಾರಿಯನ್ನು ರಾಜಗುರು ಹೊಸಕೋಟೆ ವಹಿಸಿಕೊಂಡಿದ್ದಾರೆ. ಈ ಕುರಿತು ‘ವಿಷ್ಣು ಸೇನಾ ಸಮಿತಿ’ ಅಧ್ಯಕ್ಷ ಶ್ರೀನಿವಾಸ್ ಮಾಹಿತಿ ನೀಡಿದರು.
‘ಅರ್ಥಪೂರ್ಣವಾಗಿ ವಿಷ್ಣುವರ್ಧನ್ ಅವರನ್ನು ಸ್ಮರಿಸುವುದು ನಮ್ಮ ಉದ್ದೇಶ. ನಾಟಕಗಳ ಜತೆಗೆ ವಿಷ್ಣು ಗೀತ ಗಾಯನ, ಛಾಯಾಚಿತ್ರ ಪ್ರದರ್ಶನ, ಪುಸ್ತಕ ಬಿಡುಗಡೆ ಮುಂತಾದ ಕಾರ್ಯಕ್ರಮಗಳು ಕೂಡಾ ನಡೆಯಲಿವೆ’ ಎಂದರು. ನಿರ್ದೇಶಕ ರವಿ ಶ್ರೀವತ್ಸ ‘ವಿಷ್ಣು ಸೇನಾ ಸಮಿತಿ’ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಯಾರೇ ಕಷ್ಟದಲ್ಲಿದ್ದರೂ ವಿಷ್ಣುವರ್ಧನ್ ಸಹಾಯ ಮಾಡುತ್ತಿದ್ದರು. ಅಂಥವರನ್ನು ಈ ರೀತಿಯ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಸ್ಮರಿಸಿಕೊಳ್ಳುತ್ತಿರುವುದು ವಿಶೇಷ. ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿನೂತನ ಮಾದರಿಯಲ್ಲಿ ವಿಷ್ಣು ನಮನ ಕಾರ್ಯಕ್ರಮ ನಡೆಯುವಂತಾಗಲಿ’ ಎಂದು ರವಿ ಶ್ರೀವತ್ಸ ಹೇಳಿದರು.