ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಸಿನಿಮಾಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್ ನಿರ್ಮಿಸುತ್ತಿರುವ ಶ್ರೀಕೃಷ್ಣ @Gmail.Com ಸಿನಿಮಾದ ಚಿತ್ರೀಕರಣ ಮುಗಿದಿದೆ.

ಡಾರ್ಲಿಂಗ್ ಕೃಷ್ಣ ಮತ್ತು ನಟಿ ಭಾವನಾ ಅಭಿನಯಿಸುತ್ತಿರುವ ಶ್ರೀಕೃಷ್ಣ @Gmail.Com ಸಿನಿಮಾದ ಹಾಡುಗಳನ್ನು ಕಳೆದ 8 ದಿನಗಳಿಂದ ಮೇಲುಕೋಟೆ ಹಾಗೂ ಮೈದೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗುತ್ತಿತ್ತು. ಸದ್ಯ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು, ಇಂದು ಮೈಸೂರಿನ ಸಂದೇಶ್ ಹೋಟೆಲ್ನಲ್ಲಿ ಕುಂಬಳಕಾಯಿ ಒಡೆದು ಸಂಭ್ರಮಿಸಲಾಯಿತು. ಒಟ್ಟು 99 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ನಿರ್ದೇಶಕ ನಾಗಶೇಖರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ನಾಯಕನಾಗಿ ಡಾರ್ಲಿಂಗ್ ಕೃಷ್ಣ ಅಭಿನಯಿಸಿದ್ದಾರೆ. ಭಾವನಾ ಈ ಚಿತ್ರದ ನಾಯಕಿ. ಚಂದನ್ ಗೌಡ ದ್ವಿತೀಯ ನಾಯಕರಾಗಿ ನಟಿಸಿದ್ದು, ನಿರ್ದೇಶಕ ರಿಷಬ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದತ್ತಣ್ಣ, ಸಾಧುಕೋಕಿಲ, ಚಿಕ್ಕಣ್ಣ, ಸಾತ್ವಿಕ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸೇರಿದಂತೆ ಹಲವರ ತಾರಾ ಬಳಗವಿದೆ.

ಈ ಹಿಂದೆ ಸಂದೇಶ್ ಪ್ರೊಡಕ್ಷನ್ಸ್ ಮೂಲಕ ಬಿಡುಗಡೆಯಾಗಿ ಯಶಸ್ವಿಯಾಗಿದ್ದ ಅಮರ್ ಚಿತ್ರವನ್ನೂ ನಾಗಶೇಖರ್ ಅವರೇ ನಿರ್ದೇಶಿಸಿದ್ದರು. ಐದು ಹಾಡುಗಳಿರುವ srikrishna@gmail.com ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರೆ, ಕವಿರಾಜ್ ಗೀತರಚನೆ ಮಾಡಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಅರುಣ್ ಸಾಗರ್ ಕಲಾ ನಿರ್ದೇಶನವಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಈ ವರ್ಷದ ಕೊನೆಯಲ್ಲಿ ಚಿತ್ರ ತೆರೆಗೆ ಬರಲಿದೆ.
ಇದನ್ನೂ ಓದಿ: 'ನೀವು ಹೇಗೆ ಹಣ ಸಂಪಾದಿಸುತ್ತೀರಿ'? ರಾಜ್ ಕುಂದ್ರಾ- ಕಪಿಲ್ ಶರ್ಮಾ ಶೋ ವಿಡಿಯೋ ವೈರಲ್