ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಚಿತ್ರವು ಕಳೆದ ವರ್ಷವೇ ಸೆನ್ಸಾರ್ ಆಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ವರ್ಷ ಬಿಡುಗಡೆಯಾಗುವುದರ ಜೊತೆಗೆ ಹಲವಾರು ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಈ ಚಿತ್ರ ಪ್ರಶಸ್ತಿಗಳನ್ನು ಗಳಿಸಿರಬೇಕಿತ್ತು. ಆದರೆ, ಲಾಕ್‍ಡೌನ್‍ನಿಂದ ಯಾವುದೂ ಸಾಧ್ಯವಾಗಿರಲಿಲ್ಲ. ಇತ್ತೀಚೆಗಷ್ಟೇ ಸಿನಿಮಾ ರೋಮ್ ಮತ್ತು ಢಾಕಾ ಚಿತ್ರೋತ್ಸವಕ್ಕೆ ಪ್ರದರ್ಶನವಾಗುವುದಕ್ಕೆ ಆಯ್ಕೆಯಾಗಿತ್ತು.

'ಇಲ್ಲಿರಲಾರೆ ಅಲ್ಲಿ ಹೋಗಲಾರೆ' ಸಿನಿಮಾ ಈಗ ರೋಮ್ ಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಪಡೆದಿದೆ. ರೋಮ್ ಚಿತ್ರೋತ್ಸವದ ಏಷ್ಯನ್ ಕಾಂಪಿಟೇಶನ್ ವಿಭಾಗದಲ್ಲಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಪಡೆದಿದೆ. ರೋಮ್‍ನಲ್ಲಿ ನಡೆದ ಏಷ್ಯಾಟಿಕಾ ಚಲನಚಿತ್ರೋತ್ಸವದಲ್ಲಿ ಈ ಸಿನಿಮಾ ಡಿಸೆಂಬರ್ 12ರಂದು ಪ್ರದರ್ಶನಗೊಂಡಿತ್ತು. ಈಗ ಚಿತ್ರವು ಪ್ರಶಸ್ತಿ ಪಡೆದಿರುವುದು ವಿಶೇಷ. ಜಯಂತ ಕಾಯ್ಕಿಣಿ ಅವರ 'ಹಾಲಿನ ಮೀಸೆ' ಎಂಬ ಕಥೆಯನ್ನು ಆಧರಿಸಿದ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಚಿತ್ರವು ಸಮಾಕಾಲೀನ ಸಾಮಾಜಿಕ ಜ್ವಲಂತ ಧ್ವಂಧ್ವವನ್ನು ಹೇಳುತ್ತದೆ. ಸುಖವನ್ನು ಅರಸುತ್ತಾ ಹೋಗುವ ಈ ಕಾಲದ ಜನರ ಪಯಣ ನೆಮ್ಮದಿಗೆ ಭಂಗವಾಗುತ್ತಿದೆಯೇ ಎಂಬ ಪ್ರಶ್ನೆಗೆ ಈ ಚಿತ್ರದಲ್ಲಿ ಉತ್ತರ ಹುಡುಕುವ ಪ್ರಯತ್ನ ಮಾಡಲಾಗಿದೆ.
ಇದನ್ನೂ ಓದಿ: ಬಾಲಿವುಡ್ ಚಿತ್ರರಂಗಕ್ಕೂ ಕಾಲಿಟ್ಟ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ..!
ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ ಇದ್ದಾಗಿದ್ದು, 60ರ ದಶಕದಿಂದ ಪ್ರಾರಂಭವಾಗಿ ಹೊಸ ಶತಮಾನದವರೆಗೂ ಮುಂದುವರೆಯುತ್ತದೆ. ಈ ಚಿತ್ರಕ್ಕೆ ಗಿರೀಶ್ ಕಾಸರವಳ್ಳಿ ಅವರೇ ಚಿತ್ರಕಥೆ ಬರೆದಿದ್ದು, ಈ ಹಿಂದೆ 'ದ್ವೀಪ' ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಹೆಚ್.ಎಂ. ರಾಮಚಂದ್ರ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇನ್ನು ಎಸ್.ಆರ್. ರಾಮಕೃಷ್ಣ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ದೃಶಾ ಕೊಡಗು, ಆರಾಧ್ಯ, ಪ್ರವರ್ಥ ರಾಜು ನಲ್ಮೆ, ಪವಿತ್ರಾ, ಮಲಾತೇಶ್, ಪುಷ್ಪಾ ರಾಘವೇಂದ್ರ ಮುಂತಾದವರು ನಟಿಸಿದ್ದು, ಸಂಗಮ ಫಿಲಂಸ್ ಬ್ಯಾನರ್ ಅಡಿಯಲ್ಲಿ ಎಸ್.ವಿ. ಶಿವಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.