ಚೆನ್ನೈ: ಧಾರ್ಮಿಕ ವಿಧಿ ವಿಧಾನ, ಸಕಲ ಸರ್ಕಾರಿ ಗೌರವಗಳೊಂದಿಗೆ ಸಂಗೀತ ಮಾಂತ್ರಿಕ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅಂತ್ಯಕ್ರಿಯೆ ನೆರವೇರಿದೆ.
ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ತಾಮರೈಪಾಕಂನಲ್ಲಿರುವ ಎಸ್ಪಿಬಿ ಅವರ ರೆಡ್ ಹಿಲ್ಸ್ ಫಾರ್ಮ್ಹೌಸ್ನಲ್ಲಿ ಪುತ್ರ ಎಸ್.ಪಿ.ಚರಣ್ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಸ್ವರ ಸಾಮ್ರಾಟನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಅಭಿಮಾನಿಗಳು, ಗಣ್ಯರು, ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ಪೊಲೀಸ್ ಇಲಾಖೆಯಿಂದ ಎಸ್ಪಿಬಿಗೆ ಗೌರವ ಸಮರ್ಪಣೆ ಮಾಡಲಾಗಿದೆ.
ಆಗಸ್ಟ್ 5ರಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಗಾನ ಗಂಧರ್ವ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ (74) ನಿನ್ನೆ ಕೊನೆಯುಸಿರೆಳೆದಿದ್ದರು. ಚೆನ್ನೈನ ಮಹಾಲಿಂಗಪುರಂನಲ್ಲಿರುವ ಬಾಲು ನಿವಾಸದಲ್ಲಿ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ರಾತ್ರಿ ರೆಡ್ ಹಿಲ್ಸ್ ಫಾರ್ಮ್ ಹೌಸ್ಗೆ ಎಸ್ಪಿಬಿ ಅವರ ಪಾರ್ಥಿವ ಶರೀರವನ್ನು ತರಲಾಗಿತ್ತು.