ಮುಂಬೈ : ಕೊರೊನಾ ವೈರಸ್ ಸಂದರ್ಭದಲ್ಲಿ ಸಾವಿರಾರು ನಿರ್ಗತಿಕರಿಗೆ ಸಹಾಯ ಮಾಡಿ ನಿಜ ಜೀವನದಲ್ಲೂ ಹೀರೊ ಆಗಿ ಹೊರಹೊಮ್ಮಿರುವ ನಟ ಸೋನು ಸೂದ್ಗೆ ಇದೀಗ ಸಂಕಷ್ಟ ಎದುರಾಗಿದೆ. ಅವರಿಗೆ ಸಂಬಂಧಿಸಿರುವ ಆರು ಪ್ರದೇಶಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸರ್ವೇ ನಡೆಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ನಟ ಸೋನು ಸೂದ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ ಭೇಟಿ ಮಾಡಿದ್ದರು. ಈ ವೇಳೆ ಅವರನ್ನ ಅಲ್ಲಿನ ಸರ್ಕಾರಿ ಕಾರ್ಯಕ್ರಮಗಳಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಐಟಿ ಅಧಿಕಾರಿಗಳು ಸರ್ವೇ ನಡೆಸಿದ್ದು, ಇದರಿಂದ ಅವರ ಸಾವಿರಾರು ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.
ಬಹುಭಾಷಾ ನಟ ಸೋನು ಸೂದ್ಗೆ ಸೇರಿರುವ ಆರು ಸ್ಥಳಗಳಲ್ಲಿ ಐಟಿ ಇಲಾಖೆ ಸರ್ವೇ ನಡೆಸಿದೆ ಎಂಬ ಮಾಹಿತಿ ಇದೀಗ ಲಭ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ನಟನಿಂದ ಈವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಲಭ್ಯವಾಗಿಲ್ಲ.
ಆದರೆ, ಅವರ ಆಸ್ತಿಯನ್ನು ಐಟಿ ಇಲಾಖೆ ಸಮೀಕ್ಷೆ ನಡೆಸಿದೆ. ಕೆಲವೊಂದು ಖಾತೆಗಳಲ್ಲಿ ಅವ್ಯವಹಾರ ನಡೆದಿದೆಯೋ ಇಲ್ಲಲೋ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲಿಸುತ್ತಿದಾರೆ ಎನ್ನಲಾಗಿದೆ. ಮುಂಬೈನಲ್ಲಿರುವ ಅವರ ನಿವಾಸ, ಕಚೇರಿ ಹಾಗೂ ಲಖನೌದಲ್ಲಿರುವ ಕಂಪನಿಯನ್ನು ಆದಾಯ ತೆರಿಗೆ ಇಲಾಖೆ ಸರ್ವೇ ಮಾಡಿದೆ ಎನ್ನಲಾಗಿದೆ.
ಇದನ್ನೂ ಓದಿರಿ: ದಾಲ್ ಸರೋವರದ ಮೇಲೆ 'ಏರ್ ಶೋ': 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅಪರೂಪದ ಅವಕಾಶ
ಕೇಜ್ರಿವಾಲ್ ಭೇಟಿಯಾಗಿದ್ದ ಸಂದರ್ಭದಲ್ಲಿ ಇವರು ರಾಜಕೀಯಕ್ಕೆ ಸೇರಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬಂದಿದ್ದವು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ನಟ, ಯಾವುದೇ ಕಾರಣಕ್ಕೂ ತಾವು ರಾಜಕೀಯಕ್ಕೆ ಬರಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು.