ಖಾಸಗಿ ವಾಹಿನಿಯ ಖ್ಯಾತ ಕಾರ್ಯಕ್ರಮ 'ಸರಿಗಮಪ' ಶೋನಲ್ಲಿ ವಿಜೇತರಾಗಿದ್ದ ಚನ್ನಪ್ಪ ಹುದ್ದಾರ, 'ಲೈಟಾಗಿ ಲವ್ವಾಗಿದೆ' ಸಿನಿಮಾ ಮೂಲಕ ನಾಯಕರಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿರುವುದು ಎಲ್ಲರಿಗೂ ತಿಳಿದ ವಿಚಾರ. ಬಹುತೇಕ ಶೂಟಿಂಗ್ ಮುಗಿಸಿರುವ 'ಲೈಟಾಗಿ ಲವ್ವಾಗಿದೆ' ಚಿತ್ರದ ಹಾಡುಗಳನ್ನು ರಾಜಕುಮಾರ ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿನ್ನೆ ಬಿಡುಗಡೆ ಮಾಡಿದರು.
ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ ನಿರ್ದೇಶಕ ಸಂತೋಷ್ ಆನಂದ್ ರಾಮ್ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಶುಭ ಕೋರಿದರು. ಮುದ್ದಾದ ಲವ್ ಸ್ಟೋರಿ ಜೊತೆಗೆ ಒಂದು ಸಂದೇಶವನ್ನು ಈ ಚಿತ್ರ ಒಳಗೊಂಡಿದೆಯಂತೆ. ಚನ್ನಪ್ಪ ಹುದ್ದಾರ ಈ ಚಿತ್ರದಲ್ಲಿ ದರ್ಶನ್ ಅಭಿಮಾನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಚನ್ನಪ್ಪ ಜೊತೆಯಾಗಿ ದಿವ್ಯ ವಾಗುಕರ್ ಅಭಿನಯಿಸಿದ್ದಾರೆ. ಇವರ ಜೊತೆಗೆ ಸಚಿನ್ ತಿಮ್ಮಯ್ಯ ಕೂಡಾ ಚಿತ್ರದಲ್ಲಿ ನಟಿಸಿದ್ದು ಅವರ ಜೋಡಿಯಾಗಿ ಶ್ವೇತಾ ಕಲ್ಮಟ್ ಕಾಣಿಸಿಕೊಂಡಿದ್ದಾರೆ. ಸಾಹಿತಿ ಗುರುರಾಜ ಗದಾಡಿ ಮೊದಲ ಬಾರಿ ಚಿತ್ರಕಥೆ ಬರೆದು ಈ ಸಿನಿಮಾವನ್ನು ನಿರ್ದೇಶಿಸುವುದರ ಜೊತೆಗೆ ಸ್ನೇಹಿತರ ಜೊತೆ ಗೂಡಿ ನಿರ್ಮಾಣ ಕೂಡಾ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಆಕಾಶ್ ವರ್ಮಾ ಸಂಗೀತ ನೀಡಿದ್ದಾರೆ. ಶಿವಪುತ್ರ, ವಿನೋದ್ ಕ್ಯಾಮರಾ ವರ್ಕ್ ಮಾಡಿದ್ದು, ಆಯುರ್ ಸ್ವಾಮಿ ಸಂಕಲನ ಮಾಡುವುದರ ಜೊತೆಗೆ ಸಂಭಾಷಣೆಯನ್ನೂ ಬರೆದಿದ್ದಾರೆ. ನಿಜ ಜೀವನದಲ್ಲಿ ಕೂಡಾ ದರ್ಶನ್ ಅಭಿಮಾನಿ ಆಗಿರುವ ಗಾಯಕ ಚನ್ನಪ್ಪ ಹುದ್ದಾರ ಬೆಳ್ಳಿ ತೆರೆ ಮೇಲೆ ಯಾವ ರೀತಿ, ಗಮನ ಸೆಳೆಯುತ್ತಾರೆ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ.