ತೆಲುಗಿನ 'ಗೀತ ಗೋವಿಂದಂ' ಚಿತ್ರದ ಇಂಕೇಮ್ ಇಂಕೇಮ್ ಕಾವಾಲೇ...'ಅಲಾ ವೈಕುಂಠಮುರಮುಲೋ' ಚಿತ್ರದ ಸಾಮಜ ವರಗಮನ....ತಮಿಳಿನ 'ವಿಶ್ವಾಸಂ' ಚಿತ್ರದ ಕಣ್ಣಾನ ಕಣ್ಣೆ.. ಹಾಡು ಸಂಗೀತ ಪ್ರಿಯರಿಗೆ ಹುಚ್ಚು ಹಿಡಿಸಿದಂತ ಹಾಡುಗಳು. ಈ ಹಾಡು ಹಾಡಿದ ಸಿದ್ ಶ್ರೀರಾಮ್ ಈಗ ಕನ್ನಡಕ್ಕೆ ಬರುತ್ತಿದ್ದಾರೆ. 'ಟಾಮ್ ಅ್ಯಂಡ್ ಜೆರ್ರಿ 'ಸಿನಿಮಾ ಹಾಡನ್ನು ಹಾಡುವ ಮೂಲಕ ಸಿದ್ ಶ್ರೀರಾಮ್ ಸ್ಯಾಂಡಲ್ವುಡ್ಗೆ ಬರುತ್ತಿದ್ದಾರೆ.
'ಟಾಮ್ ಅ್ಯಂಡ್ ಜೆರ್ರಿ' ಚಿತ್ರವನ್ನು ರಿದ್ಧಿ ಸಿದ್ಧಿ ಬ್ಯಾನರ್ ಅಡಿಯಲ್ಲಿ ರಾಜು ಶೆರಿಗಾರ್ ನಿರ್ಮಿಸುತ್ತಿದ್ದು, ರಾಘವ್ ವಿನಯ್ ಶಿವಗಂಗೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ವಿನಯ್ ಶಿವಗಂಗೆ ಇದಕ್ಕೂ ಮುನ್ನ 'ಕೆಜಿಎಫ್' ಚಿತ್ರಕ್ಕೆ ಸಂಭಾಷಣೆ ರಚಿಸಿ ಮಾತಿನ ಮಾಂತ್ರಿಕ ಎನಿಸಿಕೊಂಡಿದ್ದಾರೆ. ಜೀವನದ ಏರಿಳಿತಗಳ ನಡುವೆ ಸಾಗುವ ಮಧ್ಯಮ ವರ್ಗದ ಜನರ ಬದುಕನ್ನು ವಿಮರ್ಶಿಸಿ ಅತ್ಯಂತ ಕಾಳಜಿಯಿಂದ ಕಥೆ-ಚಿತ್ರಕಥೆ ರಚಿಸಿ ಈ ಸಿನಿಮಾವನ್ನು ಮಾಡಲಾಗುತ್ತಿದೆ. ಚಿತ್ರದ ಹಾಡುಗಳಿಗೆ ಮ್ಯಾಥ್ಯೂಸ್ ಮನು ಸಂಗೀತ ನೀಡಿದ್ದಾರೆ. ಇದಕ್ಕೂ ಮುನ್ನ ಸಿದ್ ಶ್ರೀರಾಮ್ಗೆ ಕನ್ನಡದಲ್ಲಿ ಹಾಡಲು ಅನೇಕ ಆಫರ್ ಇತ್ತು. ಆದರೆ ನಾನು ಕನ್ನಡದಲ್ಲಿ ಹಾಡುವ ಹಾಡು ಹೀಗೇ ಇರಬೇಕು ಎಂಬ ಪರಿಕಲ್ಪನೆಯೊಂದು ಅವರಿಗೆ ಇದ್ದಿದ್ದರಿಂದ ಇದುವರೆಗೂ ಯಾವ ಹಾಡುಗಳನ್ನು ಅವರು ಒಪ್ಪಿಕೊಂಡಿರಲಿಲ್ಲ. ಇದೀಗ 'ಹಾಯಾಗಿದೆ ಎದೆಯೊಳಗೆ....' ಎಂಬ ಹಾಡನ್ನು ಸಿದ್ ಹಾಡುತ್ತಿದ್ದಾರೆ. ಚಿತ್ರಪ್ರೇಮಿಗಳು ಕನ್ನಡದಲ್ಲಿ ಸಿದ್ ಶ್ರೀರಾಮ್ ಹೇಗೆ ಹಾಡಲಿದ್ದಾರೆ ಎಂಬುದನ್ನು ಕೇಳಲು ಕಾತರಿಂದ ಕಾಯುತ್ತಿದ್ದಾರೆ.
ಸಿದ್ ಶ್ರೀರಾಮ್ ಕನ್ನಡದಲ್ಲಿ ಹಾಡುತ್ತಿದ್ದಾರೆ ಎಂಬ ಕಾರಣಕ್ಕೆ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ''ಈ ಸಿನಿಮಾದ ಎಲ್ಲಾ ಹಾಡುಗಳು ಬಹಳ ಚೆನ್ನಾಗಿವೆ. ಸಿನಿಮಾ ನಿಜಕ್ಕೂ ಬ್ಲಾಕ್ ಬಸ್ಟರ್ ಆಗುತ್ತದೆ. ಮ್ಯಾಥ್ಯೂಸ್ ಮನು ನಿಜಕ್ಕೂ ಮೆಲೋಡಿ ಕಿಲ್ಲರ್ ಎಂದು ಸಿದ್ ಶ್ರೀರಾಮ್ ಪ್ರಶಂಸಿಸಿದ್ದಾರೆ. 'ಟಾಮ್ ಅ್ಯಂಡ್ ಜೆರ್ರಿ' ಚಿತ್ರದಲ್ಲಿ ನಿಶ್ಚಿತ್ ಕೆರೋಡಿ ನಾಯಕನಾಗಿ ನಟಿಸುತ್ತಿದ್ದರೆ, ಚೈತ್ರಾ ರಾವ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಜೈ ಜಗದೀಶ್, ತಾರಾ ಅನುರಾಧ, ರಾಕ್ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು ಹಾಗೂ ಇನ್ನಿತರರು ನಟಿಸಿದ್ದಾರೆ.