1975ರಲ್ಲಿ ಕನ್ನಡ ಚಿತ್ರರಂಗದಲ್ಲಿ ಕಮಾಲ್ ಮಾಡಿದ್ದ ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನ ಚಿತ್ರ 'ಶುಭಮಂಗಳ' ಪ್ರಣಯರಾಜ ಶ್ರೀನಾಥ್ ಮತ್ತು ಆರತಿ ಕಾಂಬಿನೇಷನ್ನಲ್ಲಿ ಹಿಟ್ ಆಗಿತ್ತು. ಸದ್ಯ ಅದೇ ಶಿರ್ಷಿಕೆಯೊಂದಿಗೆ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಚಿತ್ರ ತೆರೆ ಮೇಲೆ ಬರಲು ಸಿದ್ಧವಾಗಿದೆ.
ಹೌದು, ’ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ಬಳಿಕ ಮೇಘನಾ ಗಾವಂಕರ್ ಅಭಿನಯಿಸುತ್ತಿರೋ ಸಿನಿಮಾ ಶುಭಮಂಗಳಕ್ಕೆ ಯುವ ನಿರ್ದೇಶಕ ಸಂತೋಷ್ ಗೋಪಾಲ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಅಲ್ಲದೇ, ಇಂದು ಚಿತ್ರದ ಪೋಸ್ಟರ್ ಅನ್ನು ಹಿರಿಯ ನಿರ್ದೇಶಕ ಭಗವಾನ್ ಅವರು ಅನಾವರಣ ಮಾಡಿ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ರು.
ಚಿತ್ರದಲ್ಲಿ ಸಿದ್ದಾರ್ಥ್ ಮಾಧ್ಯಮಿಕ್, ಹಿತಾ ಚಂದ್ರಶೇಖರ್, ರಾಕೇಶ್ ಮಯ್ಯ ಮುಖ್ಯ ಭೂಮಿಕೆಯಲ್ಲಿದ್ದಾರಂತೆ. ಕಾಮಿಡಿ ಜೊತೆಗೆ ಪಕ್ಕಾ ರೊಮ್ಯಾಂಟಿಕ್ ಶುಭಮಂಗಳ ಸಿನಿಮಾವಂತೆ. ಹಿರಿಯ ನಿರ್ದೇಶಕ ಭಗವಾನ್ ಗರಡಿಯಲ್ಲಿ ಪಳಗಿರುವ ಸಂತೋಷ್ ಗೋಪಾಲ್ ಈ ಸಿನಿಮಾವನ್ನ ನಿರ್ದೇಶನ ಮಾಡಿದ್ದಾರೆ.
ಚಿತ್ರಕ್ಕೆ ರಾಕೇಶ್ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಬಹುತೇಕ ಚಿತ್ರಕರಣ ಮುಗಿಸಿರೋ ಚಿತ್ರ, ಕೊರೊನಾ ಹಾಗೂ ಚಿತ್ರಮಂದಿರ 100 ಪರ್ಸೆಂಟ್ ಸೀಟ್ ಭರ್ತಿಗೆ ಅವಕಾಶ ನೀಡಿದ ಮೇಲೆ ತೆರೆಗೆ ತರಲು ಚಿತ್ರತಂಡ ಸಿದ್ಧತೆ ನಡೆಸಿದೆ.