ಒಂದೆಡೆ ಮಂಡ್ಯದಲ್ಲಿ ರಾಜಕೀಯ ಸಮರ ನಡೆಯುತ್ತಿದ್ದರೆ ಸ್ಯಾಂಡಲ್ವುಡ್ನಲ್ಲಿ ಇಬ್ಬರು ಸ್ಟಾರ್ಗಳ ನಡುವೆ ಬಿಗ್ ಫೈಟ್ ಶುರುವಾಗಿದೆ. ಯಾವ ನಟರ ಮಧ್ಯೆ ಫೈಟ್, ಯಾವ ವಿಷಯಕ್ಕೆ ಅಂತ ಹುಬ್ಬೇರಿಸಬೇಡಿ. ವಾರ್ ಶುರುವಾಗಿರುವುದು ಇಬ್ಬರು ಸ್ಟಾರ್ ನಟರ ಸಿನಿಮಾಗಳ ಮಧ್ಯೆ.
ಕರುನಾಡ ಚಕ್ರವರ್ತಿ, ಅಭಿನಯ ಚಕ್ರವರ್ತಿ ಇಬ್ಬರೂ 'ದಿ ವಿಲನ್' ಸಿನಿಮಾದಲ್ಲಿ ಜೊತೆಯಾಗಿ ನಟಿಸಿ ಅಭಿಮಾನಿಗಳಿಗೆ ಥ್ರಿಲ್ ನೀಡಿದ್ದರು. ಇದೀಗ ಇವರು ಅಭಿನಯಿಸಿರುವ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿದ್ದು, ಬಾಕ್ಸ್ ಆಫೀಸಿನಲ್ಲಿ ಫೈಟ್ ಶುರುವಾಗಲಿದೆ. ಖ್ಯಾತ ನಿರ್ದೇಶಕ ಪಿ.ವಾಸು ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ 'ಆನಂದ್' ಮತ್ತು ಎಸ್.ಕೃಷ್ಣ ನಿರ್ದೇಶನದಲ್ಲಿ ಕಿಚ್ಚ ಸುದೀಪ್ ನಟನೆಯ 'ಪೈಲ್ವಾನ್' ಸಿನಿಮಾ ಒಂದೇ ದಿನದಂದು ಬಿಡುಗಡೆಯಾಗಲಿವೆ. ಈ ಬಾರಿ ವರಮಹಾಲಕ್ಷ್ಮಿ ಹಬ್ಬದಂದು ಅಂದರೆ ಆಗಸ್ಟ್ 9 ರಂದು ಈ ಸಿನಿಮಾಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
'ಶಿವಲಿಂಗ' ಚಿತ್ರದ ನಂತರ ಮತ್ತೆ ಶಿವರಾಜ್ಕುಮಾರ್ ಹಾಗೂ ನಿರ್ದೇಶಕ ಪಿ.ವಾಸು ನಿರ್ದೇಶನದ 'ಆನಂದ್' ಚಿತ್ರವನ್ನು ನಿರ್ಮಾಪಕ ಯೋಗಿ ದ್ವಾರಕೀಶ್ ಆಗಸ್ಟ್ 9 ರಂದು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಈ ಚಿತ್ರದ ಮುಹೂರ್ತದ ಸಂದರ್ಭದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಮೊದಲೇ ನಿರ್ಧರಿಸಲಾಗಿತ್ತು. ಸಿನಿಮಾ ಪೋಸ್ಟರ್ ಇನ್ನೂ ಬಿಡುಗಡೆಯಾದ ಕಾರಣ ಇದು ದ್ವಾರಕೀಶ್ ಚಿತ್ರ ಸಂಸ್ಥೆಯ 52ನೇ ಸಿನಿಮಾವಾದ್ದರಿಂದ 'ಪ್ರೊಡಕ್ಷನ್ 52' ಹೆಸರಿನಲ್ಲೇ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ನಿರ್ಮಾಪಕ ಯೋಗಿ ದ್ವಾರಕೀಶ್ ಹೇಳುವ ಪ್ರಕಾರ 'ಆನಂದ್' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ರಿಲೀಸ್ ಪಕ್ಕಾ ಎನ್ನುತ್ತಿದ್ದಾರೆ.
ಇನ್ನು ಅದೇ ದಿನದಂದು ತಮ್ಮ ಚಿತ್ರ ಬಿಡುಗಡೆ ಮಾಡಲು ಕೃಷ್ಣ ಕೂಡಾ ಪ್ಲಾನ್ ಮಾಡಿದ್ದಾರೆ. ಕೃಷ್ಣ ತಮ್ಮ ಟ್ವಿಟರ್ನಲ್ಲಿ ಪೈಲ್ವಾನ್ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸುದೀಪ್ ಕೂಡಾ ಕುಸ್ತಿಗಾಗಿ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಸಿನಿಮಾದಲ್ಲಿ ಕಿಚ್ಚನ ಜೊತೆ ಆಕಾಂಕ್ಷ ಸಿಂಗ್ ನಾಯಕಿಯಾಗಿ ನಟಿಸಿದ್ದಾರೆ. ಬಾಲಿವುಡ್ ನಟ ಸುನಿಲ್ ಶೆಟ್ಟಿ, ಸುಶಾಂತ್ ಸಿಂಗ್ ವಿಶೇಷ ಪಾತ್ರದಲ್ಲಿ ಕಾಣಿಸಲಿದ್ದಾರೆ.
ಇಬ್ಬರು ಸ್ಟಾರ್ಗಳ ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಕೆಲವು ಅಭಿಮಾನಿಗಳಿಗೆ ಖುಷಿ ಆದರೆ, ಮತ್ತೆ ಕೆಲವು ಅಭಿಮಾನಿಗಳಿಗೆ ಬೇಸರ ಉಂಟುಮಾಡಿದೆ.