ಇತ್ತೀಚೆಗೆ ಕೆಲವು ಸುದ್ದಿಗಳು ಹರಿದಾಡಿದ್ದು, ಡಾ. ಶಿವರಾಜ್ಕುಮಾರ್ ತಮಿಳು ಸಿನಿಮಾವೊಂದರಲ್ಲಿ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಹೌದು, ತಮಿಳು ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಸಿನಿಮಾ ಮಾಡುತ್ತಿದ್ದು, ಆ ಚಿತ್ರದಲ್ಲಿ ಶಿವಣ್ಣ ನಟಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದ್ರೆ ಇದೀಗ ಶಿವರಾಜ್ಕುಮಾರ್ ತಮಿಳಿನ ಆ ಚಿತ್ರಕ್ಕೆ ನೋ ಎಂದಿದ್ದಾರೆ.
ಈ ಹಿಂದೆ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಬೆಂಗಳೂರಿಗೆ ಬಂದು ಶಿವಣ್ಣನಿಗೆ ಸಿನಿಮಾದ ಕಥೆಯನ್ನೂ ಹೇಳಿದ್ದರು. ಈ ಚಿತ್ರದಲ್ಲಿ ತಮಿಳು ನಟ ಚಿಯಾನ್ ವಿಕ್ರಮ್ ಕೂಡ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಅಷ್ಟೇ ಅಲ್ಲ ವಿಕ್ರಮ್ ಮಗ ಧ್ರುವ್ ವಿಕ್ರಮ್ ಕೂಡ ಬಣ್ಣ ಹಚ್ಚಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು.
ಆದ್ರೆ ಶಿವಣ್ಣ ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರಂತೆ. ಸದ್ಯ ಶಿವರಾಜ್ಕುಮಾರ್ ಹಲವಾರು ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡ ಕಾರಣ ದಿನಾಂಕಗಳ ಕೊರತೆಯಿಂದ ಈ ಸಿನಿಮಾವನ್ನು ಬಿಟ್ಟಿದ್ದಾರೆ ಎನ್ನಲಾಗಿದೆ. ಶಿವರಾಜ್ಕುಮಾರ್ ಸದ್ಯ ತಮಿಳು ನಿರ್ದೇಶಕ ವಿಜಯ್ ಮಿಲ್ಟನ್ ಆ್ಯಕ್ಷನ್ ಕಟ್ ಹೇಳ್ತಿರುವ ‘ಶಿವಪ್ಪ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ ಎ.ಹರ್ಷ ನಿರ್ದೇಶನದ ಒಂದು ಸಿನಿಮಾ ಹಾಗೂ ‘ಭಜರಂಗಿ-2’ನಲ್ಲಿಯೂ ಬಣ್ಣ ಹಚ್ಚಿದ್ದಾರೆ.
ಇಷ್ಟೆಲ್ಲಾ ಸಿನಿಮಾಗಳಲ್ಲಿ ನಟಿಸುತ್ತಿದ್ದು, ತಮಿಳಿನ ಆ ಸಿನಿಮಾಕ್ಕೆ ದಿನಾಂಕದ ಕೊರತೆಯಾಗುತ್ತದೆ ಎಂಬ ಕಾರಣಕ್ಕೆ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದಾರಂತೆ.