ಕೊರೊನಾ ವೈರಸ್ ಭೀತಿ ನಡುವೆಯೂ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ಹೆಸರಿಡದ ಸಿನಿಮಾವೊಂದು ಸೆಟ್ಟೇರಲು ಸಿದ್ಧಗೊಂಡಿದೆ. ತಂದೆ ಡಾ. ರಾಜ್ಕುಮಾರ್ ಜನ್ಮದಿನದಂದು ಅಧಿಕೃತವಾಗಿ ಹೊಸ ಸಿನಿಮಾ ಘೋಷಣೆಯಾಗಿದೆ.
ಈಗಾಗಲೇ ತಮಿಳಿನ ರವಿ ಅರಸು ಅವರ ನಿರ್ದೇಶನದಲ್ಲಿ ಆರ್ಡಿಎಕ್ಸ್ (RDX) ಸಿನಿಮಾದಲ್ಲಿ ನಟಿಸುತ್ತಿರುವ ಶಿವರಾಜ್ಕುಮಾರ್, ಇದೀಗ ಟಾಲಿವುಡ್ ನಿರ್ದೇಶಕನ ಜೊತೆ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ. ಚಿತ್ರಕಥೆ, ಸಂಭಾಷಣೆ ಬರಹಗಾರ ರಾಮ್ ಧುಲಿಪುಡಿ ಈ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.
ಶಿವರಾಜ್ಕುಮಾರ್ ಈ ಸಿನಿಮಾದಲ್ಲಿ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಭಾವನಾತ್ಮಕ ವಿಚಾರಗಳೊಂದಿಗೆ ಪ್ರೀತಿಯನ್ನು ಎತ್ತಿ ಹಿಡಿಯುವ ಕಥಾ ಹಂದರ ಇದರಲ್ಲಿದೆ. ಆರಂಭದಲ್ಲಿ ರಾಮ್ ಧುಲಿಪುಡಿ ಕಥೆಯ ಸಣ್ಣ ಎಳೆಯನ್ನು ಹೇಳಿದ್ದರು. ಕಥೆ ಹೇಳುತ್ತಿದ್ದಂತೆ ಶಿವರಾಜ್ಕುಮಾರ್ ತಕ್ಷಣವೇ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಹಲವೆಡೆ ಚಿತ್ರೀಕರಣ ನಡೆಯಲಿದೆ.
ಶ್ರೀಚರಣ್ ಪಕಲ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಕನ್ನಡದ ಖ್ಯಾತ ಛಾಯಾಗ್ರಾಹಕ ರವಿಕುಮಾರ್ ಸನಾ ಈ ಸಿನಿಮಾಗೆ ಕ್ಯಾಮರಾಮನ್ ಆಗಿ ಕೆಲಸ ಮಾಡಲಿದ್ದಾರೆ. ಈ ಚಿತ್ರವನ್ನು ಬಾಲಶ್ರೀ ರಾಮ್ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಮತ್ತು ನರಲ ಶ್ರೀನಿವಾಸ ರೆಡ್ಡಿ ಸೇರಿ ಬಂಡವಾಳ ಹೂಡುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಆರಂಭಗೊಂಡು 55 ದಿನಗಳ ಕಾಲ ಚಿತ್ರೀಕರಣಗೊಳ್ಳಲಿರುವ ಈ ನೂತನ ಚಿತ್ರಕ್ಕೆ ಉಳಿದ ಕಲಾವಿದರ ಆಯ್ಕೆ ನಡೆಯುತ್ತಿದೆ. ಶೀರ್ಷಿಕೆ ಸೇರಿದಂತೆ ಇನ್ನೂ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರ ಬರಲಿದೆ.