ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಶಿವಪ್ಪ' ಚಿತ್ರದ ಹೆಸರು ಬದಲಾಗಲಿದೆ. ಇಂದು ಅವರ ಹುಟ್ಟುಹಬ್ಬದ ಸಂದರ್ಭ ಹೊಸ ಹೆಸರನ್ನು ಘೋಷಿಸಲಾಗುತ್ತದೆ ಎಂಬ ವಿಷಯವನ್ನು ಚಿತ್ರತಂಡ ಕೆಲ ದಿನಗಳಿಂದ ಹೇಳಿಕೊಂಡು ಬರುತ್ತಿದೆ. ಹಾಗಾಗಿ, ಇಂದು ಸೋಷಿಯಲ್ ಮೀಡಿಯಾದಲ್ಲಿ ಚಿತ್ರದ ಹೊಸ ಹೆಸರು ಅಧಿಕೃತವಾಗಿ ಅನಾವರಣಗೊಳ್ಳಲಿದೆ.
ಈ ಮಧ್ಯೆ, ಚಿತ್ರಕ್ಕೆ 'ಭೈರಾಗಿ' ಎಂಬ ಹೊಸ ಹೆಸರನ್ನು ಇಡಲಾಗಿದೆ ಎಂಬ ಸುದ್ದಿ ಕೇಳಿ ಬಂದಿದೆ. ಈ ಚಿತ್ರದಲ್ಲಿ ಶಿವಣ್ಣ ಇದುವರೆಗೂ ಮಾಡದ ವಿಶೇಷ ಪಾತ್ರವೊಂದನ್ನು ಮಾಡುತ್ತಿದ್ದಾರೆ. ಅವರ ಪಾತ್ರಕ್ಕೆ ಈ ಟೈಟಲ್ ಹೇಳಿ ಮಾಡಿಸಿದಂತಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಚಿತ್ರದ ಮುಹೂರ್ತದ ಸಮಾರಂಭದಲ್ಲಿ ಖುದ್ದು ಶಿವರಾಜ್ ಕುಮಾರ್ ಚಿತ್ರಕ್ಕೆ ಶಿವಪ್ಪ ಎಂಬ ಹೆಸರನ್ನು ಇಡಲಾಗಿದೆ ಎಂದು ಘೋಷಿಸಿದ್ದರು. ಚಿತ್ರ ತಂಡದವರು ಕೂಡ ಶಿವಪ್ಪ ಎಂಬ ಹೆಸರಿನಲ್ಲೇ ಚಿತ್ರೀಕರಣ ಪ್ರಾರಂಭಿಸಿದ್ದರು. ಆದರೆ, ಆ ಹೆಸರು ಡಲ್ ಆಗಿದೆ ಎಂಬ ಅಭಿಪ್ರಾಯ ಕೇಳಿಬಂದ ಹಿನ್ನೆಲೆ, ಚಿತ್ರಕ್ಕೆ ಹೊಸ ಹೆಸರನ್ನು ಇಡಲಾಗುತ್ತಿದೆ.
ಓದಿ : ಮತ್ತೆ ಚೇಂಜ್ ಆಗಲಿದೆ ಸೆಂಚುರಿ ಸ್ಟಾರ್ ಅಭಿನಯದ 'ಶಿವಪ್ಪ' ಚಿತ್ರದ ಟೈಟಲ್!
ಭೈರಾಗಿ ಚಿತ್ರವು ತಮಿಳಿನ 'ಕಡುಗು' ಚಿತ್ರದ ರಿಮೇಕ್ ಆಗಿದೆ. ಮೂಲ ಚಿತ್ರವನ್ನು ನಿರ್ದೇಶಿಸಿದ್ದ ವಿಜಯ್ ಮಿಲ್ಟನ್ ಅವರೇ ಕನ್ನಡ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಬಹುತೇಕ ಮುಗಿದಿದ್ದು, ಸದ್ಯದಲ್ಲೇ ಕುಂಬಳಕಾಯಿ ಒಡೆಯಲಾಗುತ್ತದೆ.
ಚಿತ್ರದಲ್ಲಿ ಶಿವಣ್ಣ ಜೊತೆಗೆ ಧನಂಜಯ್, ಯಶಾ ಶಿವಕುಮಾರ್, ಅಂಜಲಿ ಮುಂತಾದವರು ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಅನೂಪ್ ಸೀಳಿನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.
ಓದಿ : ನನ್ನ ಹುಟ್ಟು ಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ಮುಖ್ಯ.. ಬರ್ತ್ಡೇ ಆಚರಣೆ ಬೇಡವೆಂದ ಹ್ಯಾಟ್ರಿಕ್ ಹೀರೋ!