ಲಖನೌ(ಉತ್ತರ ಪ್ರದೇಶ): ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ವಿರುದ್ಧ ಈಗಾಗಲೇ ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಡಿ ದೂರು ದಾಖಲಾಗಿದೆ. ಇದರ ಬೆನ್ನಲ್ಲೇ ಇದೀಗ ನಟಿ ಹಾಗೂ ಅವರ ತಾಯಿ ವಿರುದ್ಧ ಕೂಡ ಪ್ರಕರಣ ದಾಖಲಾಗಿದ್ದು, ಇದರಿಂದ ಮತ್ತಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ. ಒಂದು ವೇಳೆ, ಆರೋಪ ಸಾಬೀತುಗೊಂಡರೆ ಇಬ್ಬರನ್ನು ಬಂಧನ ಮಾಡುವ ಸಾಧ್ಯತೆ ಇದೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ತಾಯಿ ಸುನಂದಾ ಶೆಟ್ಟಿ ವಿರುದ್ಧ ಚೀಟಿಂಗ್ ಪ್ರಕರಣ ದಾಖಲಾಗಿದ್ದು, ಉತ್ತರಪ್ರದೇಶದ ಲಖನೌ ಪೊಲೀಸರು ಮುಂಬೈಗೆ ಆಗಮಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಲಖೌನ್ನ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಇಬ್ಬರು ವಿಚಾರಣೆಗೊಳಪಡುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿರಿ: ಬಯೋಪಿಕ್ ಬಗ್ಗೆ ಯೋಚನೆ ಮಾಡಿಲ್ಲ: ಮುಂದಿನ ಬೇಟೆ ವಿಶ್ವ ಚಾಂಪಿಯನ್ಶಿಪ್ ಎಂದ ನೀರಜ್ ಚೋಪ್ರಾ!
ಏನಿದು ಪ್ರಕರಣ?
ಶಿಲ್ಪಾ ಶೆಟ್ಟಿ ವಿವಿಧ ರಾಜ್ಯಗಳಲ್ಲಿ ಫಿಟ್ನೆಸ್ ಕೇಂದ್ರ ನಡೆಸುತ್ತಿದ್ದು, ಅದರ ಮುಖ್ಯಸ್ಥೆಯಾಗಿ ಶಿಲ್ಪಾ ಹಾಗೂ ನಿರ್ದೇಶಕಿಯಾಗಿ ತಾಯಿ ಸುನಂದಾ ಇದ್ದಾರೆ. ಸದ್ಯ ಮತ್ತೊಂದು ಶಾಖೆ ಆರಂಭ ಮಾಡುವುದಾಗಿ ನಂಬಿಸಿ ಇಬ್ಬರು ವ್ಯಕ್ತಿಗಳಿಂದ ಕೋಟ್ಯಂತರ ರೂಪಾಯಿ ಹಣ ಪಡೆದುಕೊಂಡಿದ್ದಾರೆ. ಆದರೆ, ಇಲ್ಲಿಯವರೆಗೆ ಫಿಟ್ನೆಸ್ ಕೇಂದ್ರ ಆರಂಭಿಸಿಲ್ಲ. ಹೀಗಾಗಿ ತಮಗೆ ಮೋಸ ಮಾಡಿದ್ದಾರೆಂದು ಇಬ್ಬರು ಇದೀಗ ದೂರು ದಾಖಲು ಮಾಡಿದ್ದಾರೆ.
ಜೋಸ್ನಾ ಚೌಹಾಣ್ ಮತ್ತು ರೋಹಿತ್ ವೀರ್ ಸಿಂಗ್ ದೂರು ದಾಖಲು ಮಾಡಿದ್ದಾರೆ. ಅದರ ವಿಚಾರಣೆ ನಡೆಸಲು ಪೊಲೀಸರು ಮುಂಬೈಗೆ ಆಗಮಿಸಿದ್ದು, ಒಂದು ವೇಳೆ ಚೀಟಿಂಗ್ ಮಾಡಿರುವುದು ಸಾಬೀತುಗೊಂಡರೆ ಇಬ್ಬರನ್ನ ಬಂಧನ ಮಾಡುವ ಸಾಧ್ಯತೆ ದಟ್ಟವಾಗಿದೆ. ವೆಲ್ನೆಸ್ ಹೆಸರಿನಲ್ಲಿ ಶಿಲ್ಪಾ ಶೆಟ್ಟಿ ಫಿಟ್ನೆಸ್ ಕೇಂದ್ರ ನಡೆಸುತ್ತಿದ್ದು, ಇಬ್ಬರು ವ್ಯಕ್ತಿಗಳಿಂದ ನಟಿಯ ತಾಯಿ ಕೋಟ್ಯಂತರ ರೂಪಾಯಿ ಪಡೆದುಕೊಂಡಿದ್ದು, ಇದೀಗ ಅವರಿಗೆ ಮುಳುವಾಗುವ ಸಾಧ್ಯತೆ ಇದೆ.