ಹಿರಿಯ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50 ನೇ ಚಿತ್ರ'ಕಸ್ತೂರಿ ಮಹಲ್' ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ ಇದೆ. ಕಸ್ತೂರಿ ಮಹಲ್, ಹೆಸರಿನಿಂದಲೇ ಸದ್ದು ಮಾಡಿದ ಸಿನಿಮಾ. ಇದು ಮಹಿಳಾ ಪ್ರಧಾನ ಚಿತ್ರವಾಗಿದ್ದು 'ಮಾಸ್ಟರ್ ಪೀಸ್' ಚೆಲುವೆ ಶಾನ್ವಿ ಶ್ರೀವಾತ್ಸವ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಪುತ್ರನೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರಾ ನಟ ಶ್ರೀಕಾಂತ್...?
ಬೆಂಗಳೂರಿನ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ನಟಿ ಶಾನ್ವಿ ಹಾಗೂ ರಂಗಾಯಣ ರಘು ತಮ್ಮ ಪಾತ್ರಗಳಿಗೆ ಧ್ವನಿ ನೀಡುತ್ತಿದ್ದಾರೆ. ಸ್ಕಂದ ಅಶೋಕ್, ರಂಗಾಯಣ ರಘು, ಬಿಗ್ಬಾಸ್ ಖ್ಯಾತಿಯ ಶೃತಿ ಪ್ರಕಾಶ್, ಕಾಶಿಮ್ ರಫಿ, ನೀನಾಸಂ ಅಶ್ವಥ್ , ಅಕ್ಷರ್ ಹೀಗೆ ದೊಡ್ಡ ತಾರಾ ಬಳಗವೇ ಈ ಚಿತ್ರದಲ್ಲಿದೆ.ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ದಿನೇಶ್ ಬಾಬು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಇದು ದಿನೇಶ್ ಬಾಬು ನಿರ್ದೇಶನದ 50ನೇ ಚಿತ್ರ. ಚಿಕ್ಕಮಗಳೂರಿನ ಕೊಟ್ಟಿಗೆ ಹಾರ, ಬಾಲೂರು ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಶ್ರೀ ಭವಾನಿ ಆರ್ಟ್ಸ್ ಲಾಂಛನದಲ್ಲಿ ರವೀಶ್ ಆರ್. ಸಿ ನಿರ್ಮಿಸಿರುವ ಈ ಚಿತ್ರಕ್ಕೆ ಅಕ್ಷಯ್ ಸಿ.ಎಸ್. ಅವರ ಸಹ ನಿರ್ಮಾಣವಿದೆ. ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಹಾಗೂ ಹರೀಶ್ ಕೃಷ್ಣ ಅವರ ಸಂಕಲನ ಇದೆ. 2021 ಹೊಸ ವರ್ಷದಂದು 'ಕಸ್ತೂರಿ ಮಹಲ್' ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.