ಶಾನ್ವಿ ಶ್ರೀವಾತ್ಸವ್ ಅಭಿನಯದ 'ತ್ರಿಶೂಲಂ' ಮತ್ತು 'ಕಸ್ತೂರಿ' ಚಿತ್ರಗಳು ಬಿಡುಗಡೆಯಾಗಲು ಸಿದ್ಧವಾಗಿವೆ. ಈ ಪೈಕಿ ಮೇ ತಿಂಗಳಲ್ಲಿ ದಿನೇಶ್ ಬಾಬು ನಿರ್ದೇಶನದ 'ಕಸ್ತೂರಿ' ಸಿನಿಮಾ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆ ಇದೆ. 'ತ್ರಿಶೂಲಂ' ಯಾವಾಗ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಯಾರಿಗೂ ನಿಖರವಾದ ಮಾಹಿತಿ ಇಲ್ಲ. ಈ ನಡುವೆ ಶಾನ್ವಿ ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಮೊದಲ ಬಾರಿಗೆ ಅವರು ಮಾಲಿವುಡ್ಗೆ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ: 'ಪೊಗರು' ಚಿತ್ರದ ಬಗ್ಗೆ ಅಪಪ್ರಚಾರ ಸರಿಯಲ್ಲ...ಧ್ರುವ ಅಭಿಮಾನಿಗಳ ಆಕ್ರೋಶ
ಶಾನ್ವಿ ಒಪ್ಪಿಕೊಂಡಿರುವ ಹೊಸ ಸಿನಿಮಾಗೆ ಬುಧವಾರ ಮುಹೂರ್ತ ನೆರವೇರಿದೆ. ನಿವಿನ್ ಪೌಲಿಗೆ ನಾಯಕಿಯಾಗಿ ಶಾನ್ವಿ ನಟಿಸುತ್ತಿರುವುದು ವಿಶೇಷ. ಈ ಚಿತ್ರಕ್ಕೆ ' ಮಹಾವೀರ್ಯಾರ್' ಎಂದು ಹೆಸರಿಡಲಾಗಿದೆ. ಈ ಚಿತ್ರವನ್ನು ಅಬ್ರಿದ್ ಶೈನ್ ನಿರ್ದೇಶನ ಮಾಡಿದರೆ, ನಿವಿನ್ ಪೌಲಿ ಅವರ ನಿರ್ಮಾಣ ಸಂಸ್ಥೆಯೇ ಈ ಚಿತ್ರವನ್ನು ನಿರ್ಮಿಸುತ್ತಿದೆ. ಇದೊಂದು ಪೀರಿಯಡ್ ಕಾಸ್ಟ್ಯೂಮ್ ಡ್ರಾಮಾ ಆಗಿದ್ದು, ಈ ಚಿತ್ರದಲ್ಲಿ ಶಾನ್ವಿ ರಾಜಸ್ಥಾನಿ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಮಲಯಾಳಂ ಚಿತ್ರರಂಗದಲ್ಲಿ ನಟಿಸುವ ಅವಕಾಶ ಸಿಕ್ಕಿದೆ ಎಂಬ ಖುಷಿಯಲ್ಲಿರುವ ಶಾನ್ವಿ, ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. "ಮಲಯಾಳಂ ಚಿತ್ರದಲ್ಲಿ ನಟಿಸಬೇಕು ಎಂಬ ಆಸೆ ಮೊದಲಿನಿಂದಲೂ ಇತ್ತು. ಈಗ ಒಂದು ಅದ್ಭುತ ತಂಡ ಸಿಕ್ಕಿದೆ. ಒಳ್ಳೆಯ ಪಾತ್ರ ಜೊತೆಯಾಗಿದೆ, ಅದೇ ಕಾರಣಕ್ಕೆ ಈ ಚಿತ್ರವನ್ನು ಒಪ್ಪಿಕೊಂಡಿದ್ದೇನೆ. ಪ್ರತಿಭಾವಂತ ತಂಡದೊಂದಿಗೆ ಕೆಲಸ ಮಾಡಲು ಖುಷಿಯಾಗುತ್ತಿದೆ" ಎಂದು ಶಾನ್ವಿ ಶ್ರೀವಾತ್ಸವ್ ಹೇಳಿಕೊಂಡಿದ್ದಾರೆ.