ಕಳೆದ 15 ದಿನಗಳಿಂದ ಕನ್ನಡ ಚಿತ್ರರಂಗದ ಚಟುವಟಿಕೆಗಳು ನಿಧಾನವಾಗಿ ಆರಂಭವಾಗುತ್ತಿದೆ. ಚಿತ್ರರಂಗವನ್ನೇ ನಂಬಿ ಬದುಕುತ್ತಿರುವ ಎಷ್ಟೋ ಸಿನಿ ಕಾರ್ಮಿಕರಿಗೆ ಇದರಿಂದ ಬಹಳ ಸಂತೋಷವಾಗಿದೆ. ಶೂಟಿಂಗ್ ಆರಂಭಿಸಲು ಸರ್ಕಾರ ಅನುಮತಿ ನೀಡದಿದ್ದರೂ ಕೆಲವೊಂದು ಚಿತ್ರಗಳು ಮುಹೂರ್ತ ಆಚರಿಸಿಕೊಳ್ಳುತ್ತಿವೆ.
![Shambho shivashankara Title released](https://etvbharatimages.akamaized.net/etvbharat/prod-images/s-s-s---21597629036872-70_1708email_1597629048_361.jpg)
ಅಘನ್ಯ ಪಿಕ್ಚರ್ಸ್ ನಿರ್ಮಿಸುತ್ತಿರುವ 'ಶಂಭೊ ಶಿವಶಂಕರ' ಚಿತ್ರದ ಫಸ್ಟ್ಲುಕ್ ಬಿಡುಗಡೆ ಆಗಿದೆ. ಡಾಲಿ ಧನಂಜಯ್ ಹಾಗೂ ವಸಿಷ್ಠ ಸಿಂಹ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು ಹಾಗೂ ರಾಜ್ಯದ ಇತರೆಡೆ ಚಿತ್ರೀಕರಣ ನಡೆಯಲಿದೆ. 'ಜನುಮದ ಜೋಡಿ' , 'ನಾಯಕಿ' ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್ ಕೋನಮಾನಹಳ್ಳಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶಂಕರ್ ಅವರಿಗೆ ಇದು ಮೊದಲ ಚಿತ್ರ.
![Shambho shivashankara Title released](https://etvbharatimages.akamaized.net/etvbharat/prod-images/s-s-s---11597629036870-44_1708email_1597629048_447.jpg)
ಶಂಕರ್ ಕೋನಮಾನಹಳ್ಳಿಯವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಗೌಸ್ ಪೀರ್ ಹಾಗೂ ಹಿತನ್ ದಾಸನ್ ಚಿತ್ರದ ಹಾಡುಗಳನ್ನು ಬರೆದಿದ್ದು ಹಿತನ್ ದಾಸನ್ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ನಟರಾಜ್ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ , ವೆಂಕಟೇಶ್ ಯುಡಿವಿ ಸಂಕಲನ ಹಾಗೂ ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಇದೆ. 'ಪಂಚತಂತ್ರ' ನಾಯಕಿ ಸೊನಲ್ ಮೊಂಟೆರಿ 'ಶಂಭೊ ಶಿವಶಂಕರ' ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಮೂವರು ನಾಯಕರಿದ್ದಾರೆ.
![Shambho shivashankara Title released](https://etvbharatimages.akamaized.net/etvbharat/prod-images/s-s-s---41597629036875-35_1708email_1597629048_730.jpg)