ಕೊರೊನಾ ವೈರೆಸ್ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಲುವಾಗಿ ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳ ಚಿತ್ರೀಕರಣವನ್ನು ಮಾರ್ಚ್ 22ರಿಂದ 31ರವರೆಗೆ ಸ್ಥಗಿತಗೊಳಿಸಲು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ನಿರ್ಧರಿಸಿದೆ.
ಈ ನಿರ್ಧಾರದಿಂದ ಪ್ರತಿನಿತ್ಯ ಟಿವಿ ಮುಂದೆ ಕೂರುವ ವೀಕ್ಷಕರಿಗೆ ಪರಿಣಾಮ ಬೀರಲಿದ್ದು, ಬ್ಯಾಂಕಿಂಗ್ ಎಪಿಸೋಡುಗಳನ್ನು ಪ್ರಸಾರ ಮಾಡಲಿದೆ. ಬ್ಯಾಂಕಿಂಗ್ ಮುಗಿದ ನಂತರ ಮರು ಪ್ರಸಾರ ಮಾಡಲು ಚಾನಲ್ಗಳು ಸಹ ಒಪ್ಪಿಕೊಂಡಿವೆ.
ಇಂದು ಸಭೆ ನಡೆಸಿದ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಹಾಗೂ ಸಂಘ ಸಂಸ್ಥೆಗಳು ಒಮ್ಮತದ ನಿರ್ಧಾರಕ್ಕೆ ಬಂದಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಕ್ಕೆ ಬದ್ಧವಾಗಿದ್ದೇವೆ ಎಂದು ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.
ಮಾರ್ಚ್ 31ರ ನಂತರ ಅಂದಿನ ಸ್ಥಿತಿಗತಿ ಅವಲೋಕಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ಧಾರವಾಹಿಗಳು ಹಾಗೂ ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ನಿಲ್ಲಿಸಲು ಅಸೋಸಿಯೇಷನ್ ನಿರ್ಧರಿಸಿದೆ ಎಂದು ತಿಳಿಸಿದರು.